ವಿಶ್ವ ಅಂಗವಿಕಲರ (disability) ದಿನಾಚರಣೆ ನಿಮಿತ್ತ ಮಜೇಥಿಯಾ ಫೌಂಡೇಷನ್ ವತಿಯಿಂದ ಹುಬ್ಬಳ್ಳಿಯಲ್ಲಿ 11 ಅಂಗವಿಕಲರಿಗೆ ಕೃತಕ ಕೈ ಕಾಲು, ವರ್ಕಿಂಗ್ ಹ್ಯಾಂಡ್ ಬುಧವಾರ ವಿತರಿಸಲಾಯಿತು. 
ಧಾರವಾಡ

(disability) ಅಂಗವೈಕಲ್ಯ ಶಾಪವಲ್ಲವೆಂದುಕೊಂಡರೆ ಯಶಸ್ಸು

ಹುಬ್ಬಳ್ಳಿ: ಅಂಗವೈಕಲ್ಯ (disability) ಶಾಪವಲ್ಲವೆಂದುಕೊಂಡು ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಮಜೇಥಿಯಾ ಫೌಂಡೇಷನ್‌ನ ಚೇರ್ಮನ್ ಜಿತೇಂದ್ರ ಮಜೇಥಿಯಾ ಅಭಿಪ್ರಾಯಪಟ್ಟರು.
ವಿಶ್ವ ಅಂಗವಿಕಲರ ದಿನ ನಿಮಿತ್ತ ಮಜೇಥಿಯಾ ಫೌಂಡೇಷನ್ ವತಿಯಿಂದ ಇಲ್ಲಿಯ ಮೂರುಸಾವಿರ ಮಠದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕೃತಕ ಕಾಲು, ಕೈ ಜೋಡಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಅಂಗವಿಕಲರಿದ್ದರೂ ಮಹತ್ತರ ಸಾಧನೆಗಳನ್ನು ಮಾಡಿ ಸೈ ಎನಿಸಿಕೊಂಡವರು ನಮ್ಮ ಮುಂದಿದ್ದಾರೆ. ಅಂಗವಿಕಲರು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಆಗಮಾತ್ರ ಸಾಧನೆ ಮಾಡಿ ತೋರಿಸಲು ಸಾಧ್ಯ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಮಾತನಾಡಿ, ಮಜೇಥಿಯಾ ಫೌಂಡೇಷನ್‌ನಿಂದ ಸಾಮಾಜಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಲಿವೆ. ಕ್ಯಾನ್ಸರ್ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಿರುವ ಹಾಸ್ಪೈಸ್ ಸೆಂಟರ್ ರೋಗಿಗಳಿಗೆ ನೆಮ್ಮದಿ ತಾಣವೆನಿಸಿದೆ ಎಂದರು.
ಫೌಂಡೇಷನ್‌ನ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಫೋನ್ ದಾಸರಾಗುತ್ತಿದ್ದಾರೆ. ಇದರಿಂದಲೂ ಕೆಲ ಅಂಗಗಳು ಊನವಾಗುವ ಸಾಧ್ಯತೆ ಇದೆ. ಪಾಲಕರು, ಮಕ್ಕಳ ಕೈಗೆ ಮೊಬೈಲ್ ಪೋನ್ ಕೊಡಬಾರದು. ಅವರಿಗೆ ಪರ್ಯಾಯ ಆಟದ ಸಾಮಗ್ರಿ ಕೊಟ್ಟು ಆರೋಗ್ಯವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ 11 ಅಂಗವಿಕಲರಿಗೆ ಕೃತಕ ಕಾಲು ಹಾಗೂ ಕೈ ಜೋಡಿಸಲಾಯಿತು. ಫೌಂಡೇಷನ್ ಸಿಇಒ ಸುನೀಲಕುಮಾರ ಕುಕನೂರ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗುರು ಭಾಂಡಗೆ, ಉಪಾಧ್ಯಕ್ಷರಾದ ಬಸವರಾಜ ವಿಜಾಪುರ, ಶಿವಾನಂದ ಗೊಂಬಿ, ಪ್ರಕಾಶ ಚಳಗೇರಿ, ಖಜಾಂಚಿ ತನುಜಾ ನಾಯಕ, ಕಾರ್ಯದರ್ಶಿಗಳಾದ ಶಿವಶಂಕರ ಕಂಠಿ, ಪ್ರಸನ್ನ ಹಿರೇಮಠ ಇತರರಿದ್ದರು.