ಹುಬ್ಬಳ್ಳಿಯಿಂದ ವಿಜಯಪುರ ಜಿಲ್ಲೆ ಇಂಚಗೇರಿ ಮಠಕ್ಕೆ ತೆರಳುತ್ತಿರುವ ದಿಂಡಿ ಪಲ್ಲಕ್ಕಿ ಪಾದಯಾತ್ರಿಕರಿಗೆ ಸೋಮವಾರ ಉಪ್ಪಿನಬೆಟಗೇರಿ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದರು. ಗೋಪಾಲ ಮಹಾರಾಜರು, ಶಂಕ್ರಪ್ಪ ಮಹಾರಾಜರು, ಚನ್ನಬಸಪ್ಪ ಕರೀಕಟ್ಟಿ ಹಾಗೂ ಪಾದಯಾತ್ರಿಕರಿದ್ದರು.
ಉಪ್ಪಿನಬೆಟಗೇರಿ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶ್ರೀಕ್ಷೇತ್ರ ಇಂಚಗೇರಿ ಮಠವು ಆಧ್ಯಾತ್ಮಿಕ ಕೇಂದ್ರವಾಗಿದ್ದು, ಸರ್ವಧರ್ಮದವರೂ ಶ್ರೀಮಠಕ್ಕೆ ಆಗಮಿಸಿ ಶ್ರೀಗಳ ಕರ್ತೃ ಗದ್ದುಗೆಗಳ ದರ್ಶನ ಪಡೆದು, ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಾರೆ ಎಂದು ಹುಬ್ಬಳ್ಳಿ ಗಿರೀಶ ಆಶ್ರಮದ ಶ್ರೀ ಗೋಪಾಲ ಮಹಾರಾಜರು ಹೇಳಿದರು.
ಗ್ರಾಮಕ್ಕೆ ಸೋಮವಾರ ಆಗಮಿಸಿದ ಇಂಚಗೇರಿ ಮಠಕ್ಕೆ ತೆರಳುವ ದಿಂಡಿ ಪಲ್ಲಕ್ಕಿ ಪಾದಯಾತ್ರಿಕರಿಗೆ ಸ್ವಾಗತ ಕೋರಿದ ನಂತರ ಜರುಗಿದ ಧಾರ್ಮಿಕ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕರ್ನಾಟಕ, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಲ್ಲಿ ಶ್ರೀಮಠದ ನೂರಾರು ಶಾಖಾ ಮಠಗಳಿವೆ. ಅಲ್ಲಿ ನಿತ್ಯ ಕಾಕಡಾರತಿ, ಬಾರಾ ಅಭಂಗ, ಪೂಜೆ, ಭಜನೆ ಸೇರಿ ಸತ್ಸಂಗ ಕಾರ್ಯಕ್ರಮಗಳು ನಡೆಯುತ್ತಿವೆ. ಇಂಚಗೇರಿ ಮಠವು, ಗುರುಲಿಂಗ ಜಂಗಮ ಮಹಾರಾಜರ ಆದಿಯಾಗಿ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ರೇವಣಸಿದ್ಧೇಶ್ವರ ಮಹಾರಾಜರ ನೇತೃತ್ವದಲ್ಲಿ ಜಾತ್ಯತೀತ ಪರಂಪರೆ ಇಂದಿಗೂ ಉಳಿಸಿ ಬೆಳೆಸಿಕೊಂಡು ಬಂದಿದೆ. 70ರ ದಶಕದಲ್ಲಿ ಶ್ರೀ ಮಾಧವಾನಂದ ಪ್ರಭೂಜಿ ಹಾಗೂ ಸಂತ ವಿನೋಬಾ ಭಾವೆ ಅವರ ನೇತೃತ್ವದಲ್ಲಿ ಭಕ್ತರು ಗೋಹತ್ಯೆಯ ವಿರುದ್ಧ ಹೋರಾಡಿದ್ದಲ್ಲದೆ, ಪ್ರಸ್ತುತ ಪೀಠಾಧಿಪತಿ ಶ್ರೀ ರೇವಣಸಿದ್ಧೇಶ್ವರ ಶ್ರೀಗಳು ಗೋಶಾಲೆ ನಿರ್ಮಿಸಿ ನೂರಾರು ಗೋವುಗಳನ್ನು ಸಲುಹುತ್ತಿದ್ದಾರೆ. ಜತೆಗೆ ಸಾಮೂಹಿಕ ಬೇಸಾಯ, ಸಹಪಂಕ್ತಿ ಭೋಜನ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು.
ಶಂಕ್ರಪ್ಪ ಮಹಾರಾಜರು ಮಾತನಾಡಿ, ಈ ಬಾರಿಯು ಇಂಚಗೇರಿ ಮಠದಲ್ಲಿ ಮೇ 25, 26 ಹಾಗೂ 27ರವರೆಗೆ ಜರುಗುವ ಶ್ರೀ ಮಾಧವಾನಂದ ಪ್ರಭುಜಿಯವರ ಪುಣ್ಯತಿಥಿ ಸಪ್ತಾಹದಲ್ಲಿ ಪಾಲ್ಗೊಳ್ಳಲೆಂದು ರಾಜ್ಯದ ವಿವಿಧ ಭಾಗದಿಂದ 80ಕ್ಕೂ ಅಧಿಕ ಭಕ್ತರು 15 ದಿನಗಳವರೆಗೆ ಹುಬ್ಬಳ್ಳಿ ವಿದ್ಯಾನಗರದ ಗಿರೀಶ ಆಶ್ರಮದಿಂದ ಪಲ್ಲಕ್ಕಿ, ವೀಣೆ ಹಾಗೂ ನಂದಿಕೋಲು ಹೊತ್ತು ಪಾದಯಾತ್ರೆ ಮೂಲಕ ಮೇ 24ರಂದು ಸಂಜೆ ಶ್ರೀ ಕ್ಷೇತ್ರ ಇಂಚಗೇರಿ ಮಠ ತಲುಪುತ್ತಾರೆ. ವರ್ಷದಲ್ಲಿ ಮೂರು ಬಾರಿ ಉಪ್ಪಿನಬೆಟಗೇರಿಗೆ ಆಗಮಿಸುವ ಭಕ್ತರಿಗೆ ಶ್ರೀಮಠದ ಭಕ್ತ ಶಂಕರ ಓರಣಕರ, ಹಾಗೂ ಆದಿತ್ಯ ಈಸರಗೊಂಡ ಎಲ್ಲರಿಗೂ ಅಲ್ಪೋಪಹಾರ ಹಾಗೂ ಅನ್ನಪ್ರಸಾದ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾಡಸಿದ್ಧ ಮುರಗೋಡ, ಶಂಕರ ಓರಣಕರ, ಸುಭಾಸ ವರೂರ, ವಿನೋಬಾ ಓರಣಕರ, ಚನ್ನಬಸಪ್ಪ ಕರೀಕಟ್ಟಿ, ರೇವಣಸಿದ್ಧಪ್ಪ ನವಲಗುಂದ, ಆದಿತ್ಯ ಈಸರಗೊಂಡ, ರವಿ ಚಂದರಗಿ, ವಿರೂಪಾಕ್ಷಪ್ಪ ಸಂಕಣ್ಣವರ, ಬಸವರಾಜ ನರಗುಂದ, ಸಾವಿತ್ರಿ ಓರಣಕರ, ರವಿ ಮೇದಾರ, ರೂಪಾ ಈಸರಗೊಂಡ, ರಮೇಶ ಓರಣಕರ, ಅಬ್ದುಲ್ ಚಿಕ್ಕುಂಬಿ, ದರ್ಶನ ವರೂರ, ಶ್ರೇಯಸ್ ಓರಣಕರ, ಮಹಮ್ಮದ್ ಅಸ್ಲಂ ಮುಲ್ಲಾ ಇತರರಿದ್ದರು.