ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ  
ಧಾರವಾಡ

ಧಾರವಾಡದಲ್ಲಿ ಧರಣಿಗೆ ಹೊರಟ ವಿದ್ಯಾರ್ಥಿಗಳ ಬಂಧನ ಸರಿಯಲ್ಲ condemnation

ಹುಬ್ಬಳ್ಳಿ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿವೃತ್ತಿಯಿಂದ ತೆರವಾಗಿರುವ ಹುದ್ದೆಗಳನ್ನು ತುಂಬಿಕೊಳ್ಳಲು ಒತ್ತಾಯಿಸಿ ಧಾರವಾಡದಲ್ಲಿ ಮಂಗಳವಾರ ಧರಣಿ ನಡೆಸಲು ಹೊರಟಿದ್ದ ವಿದ್ಯಾರ್ಥಿಗಳನ್ನು ಬಂಧಿಸಿ, ಬಿಡುಗಡೆ ಮಾಡಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಹಿಂದೆ ರಾಜ್ಯದ 43 ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳನ್ನು ತುಂಬಿಕೊಳ್ಳಲು ಒತ್ತಾಯಿಸಿ ಧಾರವಾಡದಲ್ಲಿ ಏರ್ಪಡಿಸಿದ್ದ ಬೃಹತ್ ಹೋರಾಟದ ಬಳಿಕ ಮುಖ್ಯಮಂತ್ರಿಗಳು ಒಂದು ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಹೋರಾಟಗಾರರಿಗೆ ಭರವಸೆ ನೀಡಿದ್ದರು. ಆದರೆ, ಕೊಟ್ಟ ಮಾತಿನಂತೆ ನಡೆದುಕೊಳ್ಳದಿರುವುದರಿಂದ ಪದವೀಧರ ಯುವಕರು ಅನಿವಾರ್ಯವಾಗಿ ಸರ್ಕಾರವನ್ನು ಎಚ್ಚರಿಸಲು ಪುನಃ ಹೋರಾಟಕ್ಕೆ ಮುಂದಾಗಿದ್ದರು. ಇದರಲ್ಲಿ ತಪ್ಪೇನಿಲ್ಲ. ಹೋರಾಟಗಾರರನ್ನು ಬಂಧನ ಮಾಡಿರುವುದು ಅವರ ಹಕ್ಕನ್ನು ಕಸಿದುಕೊಂಡಂತಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಾದ ಕುರುವತ್ತಪ್ಪ ದೊಡ್ಮನಿ, ಸುನೀಲ ಗೋಲಾ, ಚಾಣಕ್ಯ ಬಿ., ಗುರುದೇವ್ ಬಳಂಡಗಿ ಅವರನ್ನು ಬಂಧಿಸಿ ಬಿಡುಗಡೆ ಮಾಡಿ, ಒಂದು ಲಕ್ಷ ರೂ., ಜಾಮೀನು ನೀಡುವುದು ಮತ್ತು ಒಂದು ವರ್ಷದವರೆಗೆ ಯಾವ ಹೋರಾಟದಲ್ಲಿಯೂ ಭಾಗವಹಿಸಬಾರದೆಂಬ ಷರತ್ತು ವಿಧಿಸಿ ನೀಡಿರುವ ನೋಟಿಸ್ ಅನ್ನು ಪೊಲೀಸ್ ಇಲಾಖೆ ತಕ್ಷಣ ಹಿಂಪಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.