ಧಾರವಾಡ ಹೊಸ ಬಸ್ ನಿಲ್ದಾಣ ಬಳಿ ನಿರ್ಮಿಸಿರುವ ನೂತನ ಗಾಂಧಿ ಭವನ.
ಧಾರವಾಡ: ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಸುಮಾರು ಮೂರುವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗಾಂಧಿ ಭವನ ಯಾವುದೇ ಚಟುವಟಿಕೆಗಳಿಲ್ಲದೆ ಸ್ತಬ್ದವಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಽ ಭವನ ನಿರ್ಮಿಸಿ ನಿಯಮಾನುಸಾರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ. ವರ್ಷಪೂರ್ತಿ ಗಾಂಧಿಜಿ ಕುರಿತಾದ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ ಜಿಲ್ಲಾಡಳಿತವು ಹು-ಧಾ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ. ಆದರೆ, ಪಾಲಿಕೆಯಿಂದ ಗಾಂಧಿಜಿ ಕುರಿತಾದ ಚಟುವಟಿಕೆಗಳನ್ನು ಆಯೋಜಿಸುವುದಕ್ಕೆ ಪುರುಸೊತ್ತೇ ಇಲ್ಲದಂತಾಗಿದೆ. ಒಂದು ಬಾರಿ ಗಾಂಧಿ ಜಯಂತಿ ಕಾರ್ಯಕ್ರಮ ಆಯೋಜಿಸಿದ್ದನ್ನು ಬಿಟ್ಟರೆ ಮತ್ತಾವುದೇ ಕಾರ್ಯಕ್ರಮ ಅಲ್ಲಿ ನಡೆದಿಲ್ಲ. ಕೋಟ್ಯಂತರ ರೂ. ವೆಚ್ಚ ಮಾಡಿ ಗಾಂಧಿ ಭವನ ನಿರ್ಮಿಸಿರುವ ಉದ್ದೇಶವಾದರೂ ಏನು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಗಾಂಧಿ ಕಾರ್ಯಕ್ರಮಗಳನ್ನು ಬಿಟ್ಟರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಂತಿಲ್ಲ ಎಂಬ ನಿಯಮವಿದೆ. ಹೀಗಾಗಿ ಸುಸಜ್ಜಿತ ಕಟ್ಟಡ ಉಪಯೋಗವಾದೇ ಧೂಳು ತಿನ್ನುತ್ತಿದೆ.
ಮೂರು ಗುಂಟೆ ಪ್ರದೇಶದಲ್ಲಿ ನಿರ್ಮಿಸಿರುವ ಗಾಂಧಿ ಭವನ ಕಟ್ಟಡ ಆಕರ್ಷಕವಾಗಿದೆ. ಭವನದೊಳಗಡೆ ಸುಸಜ್ಜಿತ ಕಾರ್ಯಕ್ರಮಗಳ ಆಯೋಜನೆಗೆ ಸಂಭಾAಗಣವಿದೆ. ಗಾಂಧಿಜಿ ಹಾಗೂ ಸ್ವಾತಂತ್ರ‍್ಯ ಹೋರಾಟ ಚಳುವಳಿ ಕುರಿತಂತೆ ಪೋಟೋ ಗ್ಯಾಲರಿ ಇದೆ. ಗ್ರಂಥಾಲಯವಿದೆ. ಇಷ್ಟೆಲ್ಲ ಸೌಲಭ್ಯ ಇರುವ ಗಾಂಧಿ ಭವನ ವಿದ್ಯಾರ್ಥಿಗಳಿಗಾಗಲಿ ಗಾಂಧಿಪರ ಸಂಘಟನೆಗಳಿಗಾಗಲಿ ಈವರೆಗೂ ಬಳಕೆಗೆ ಮುಕ್ತಗೊಳಿಸಿಲ್ಲ.
ಇದೇ ಸೆಪ್ಟೆಂಬರ್ ತಿಂಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಿಲ್ಲಾಡಳಿತದ ಮೂಲಕ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಅಂದಿನಿದ ಪಾಲಿಕೆಯವರು ಗಾಂಧಿ ಭವನಕ್ಕೆ ಕೀಲಿ ಹಾಕಿದ್ದು ನಿರ್ವಹಣೆ ಮರೆತಿದ್ದಾರೆ. ಇದರಿಂದ ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟಿದ ಭವನ ಧೂಳು ತಿನ್ನುತ್ತಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಗಾಂಧಿ ಕುರಿತಂತೆ ಕಾರ್ಯಕ್ರಮ ಮಾಡುವುದಕ್ಕೆ ಯಾರಾದರೂ ಮುಂದೆ ಬಂದರೆ ಗಾಂಧಿ ಭವನ ನೀಡುತ್ತೇವೆ ಎಂದು ಹೇಳುವ ಪಾಲಿಕೆ ಅಧಿಕಾರಿಗಳು, ಭವನದ ಉದ್ದೇಶಿತ ಯೋಜನೆಯನ್ನೇ ಪಾಲಿಸುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಗಾಂಧಿ ಭವನದಲ್ಲಿರುವ ಗ್ರಂಥಾಲಯವನ್ನು ಪಕ್ಕದಲ್ಲಿರುವ ಸರ್ಕಾರಿ ಕಾಲೇಜು, ಶಾಲೆಗಳ ವಿದ್ಯಾರ್ಥಿಗಳಿಗೆ ಬಳಕೆಗೆ ಅವಕಾಶ ನೀಡಿದ್ದೇವೆ. ಗಾಂಧಿ ಭವನದಲ್ಲಿ ಯಾವೆಲ್ಲ ಚಟುವಟಿಕೆಗಳನ್ನು ನಡೆಸಬಹುದು ಎಂದು ಸಲಹಾ ಸಮಿತಿಯೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾಹಿತಿ ಕೇಳಿದ್ದೇವೆ. ಗಾಂಧಿ ಭವನದಲ್ಲಿ ಬಹುಪಾಲ ಗಾಂಧಿಜಿ ಕುರಿತು ಕಾರ್ಯಕ್ರಮಗಳ ಆಯೋಜಿಸುವ ಉದ್ದೇಶವಿದೆ. ಜತೆಗೆ ಗಾಂಧಿ ಸಂಘಟನೆಗಳು, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ಕೊಡುತ್ತೇವೆ. ಗಾಂಧಿ ಭವನ ನಿರ್ವಹಣೆಯನ್ನು ಮಹಾನಗರ ಪಾಲಿಕೆಯೇ ಮಾಡಲಿದೆ.