Former MLA Amrita Desai released the poster of the wrestling tournament. 
ಧಾರವಾಡ

ಧಾರವಾಡ ಸಂಸದ ಕ್ರೀಡಾ ಮಹೋತ್ಸವ; ಕೆಸಿಡಿಯಲ್ಲಿ ಕುಸ್ತಿ ಪಂದ್ಯಾವಳಿ

ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಸ್ತುತಪಡಿಸುವ "ಧಾರವಾಡ ಸಂಸದ ಕ್ರೀಡಾ ಮಹೋತ್ಸವದಲ್ಲಿ ಆಯೋಜಿಸಿರುವ ಕುಸ್ತಿ ಪಂದ್ಯಾವಳಿಗಳು ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಮಾ. 13 ಮತ್ತು 14ರಂದು ಜರುಗಲಿವೆ ಎಂದು ಮಾಜಿ ಶಾಸಕ ಅಮೃತ ದೇಸಾಯಿ ಹೇಳಿದರು.
ನಗರದಲ್ಲಿ ಕುಸ್ತಿ ಪಂದ್ಯಾವಳಿಯ ಭಿತ್ತಿಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ದೇಶದ ಪ್ರತಿಷ್ಠಿತ ಕುಸ್ತಿ ಪಟುಗಳು ಹಾಗೂ ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕುಸ್ತಿ ಪಟುಗಳು ಕ್ರೀಡಾ ಮಹೋತ್ಸವದಲ್ಲಿ ಭಾಗವಹಿಸುವರು. 13ರಂದು ಮಧ್ಯಾಹ್ನ 2 ಗಂಟೆಯಿಂದ ತೂಕದ ಕುಸ್ತಿ ಹಾಗೂ 14ರಂದು ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆಗಳು ಜರುಗಲಿವೆ. ಸ್ಪರ್ಧೆಗಳಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಕುಸ್ತಿ ಪಟುಗಳಾದ ಮಿರ್ಜಾ ಇರಾನ್​, ಪುಷ್ಪೇಂದ್ರ ಹರಿಯಾಣ, ದಸರಾ ಕಂಠೀರವ 2024ರ ಖ್ಯಾತಿಯ ಶಿವಯ್ಯ ಪೂಜಾರಿ, ದಸರಾ ಕಂಠೀರವ 2025ರ ಖ್ಯಾತಿಯ ಕಾಮೇಶ ಪಾಟೀಲ ಕಂಗ್ರಾಳಿ, ಕರ್ನಾಟಕ ಕೇಸರಿ ಶಿವಾನಂದ ದಡ್ಡಿ, ಮಹಾರಾಷ್ಟ್ರ ಚಾಂಪಿಯನ್​ ಪ್ರದಿಪ ಠಾಕೂರ್​ ಸೇರಿ 73 ಜೋಡಿ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ಅಲ್ಲದೆ, ಕರ್ನಾಟಕ ಖ್ಯಾತ 7 ಜೋಡಿ ಮಹಿಳಾ ಕುಸ್ತಿಪಟುಗಳು ಭಾಗವಹಿಸುತ್ತಿದ್ದಾರೆ ಎಂದರು.
ಕುಸ್ತಿ ಪಂದ್ಯಾವಳಿಗಳ ವಿಜೇತರಿಗೆ ಮಾ. 14ರಂದು ಬಹುಮಾನ ವಿತರಣೆ ನಡೆಯಲಿದೆ. ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಮನ್ಸುಖ್​ ಮಾಂಡವೀಯ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಾಗವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನಾಗರಾಜ ಛಬ್ಬಿ, ಜ್ಯೋತಿ ಪಾಟೀಲ, ಸಂತೋಷ್​ ಚೌಹಾಣ, ನಿಂಗಪ್ಪ ಸುತಗಟ್ಟಿ, ಈರೇಶ ಅಂಚಟಗೇರಿ, ಶಿವು ಹಿರೇಮಠ, ಇತರರಿದ್ದರು.