ಧಾರವಾಡ ತಾಲೂಕಿನ ಜೀರಿಗಿವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.  
ಧಾರವಾಡ

ಮದ್ಯ, ತಂಬಾಕು ಮುಕ್ತ ಗ್ರಾಮ ಜೀರಿಗಿವಾಡ no arrack

ಪ್ರಮುಖ ಮುಖ್ಯಾಂಶಗಳು

  • ಮೂರು ವರ್ಷಗಳ ಹಿಂದೆಯೇ ತಂಬಾಕು ಮಾರಾಟ ನಿಷೇಧ
  • ಗ್ರಾಮಸ್ಥರ ಒಗ್ಗಟ್ಟೇ ಇಲ್ಲಿನ ಶಕ್ತಿ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ

ರಾಜ್ಯಾದ್ಯಂತ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಖಾ, ಪಾನ್ ಮಸಾಲಾ ಉತ್ಪನ್ನಗಳ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಒಂದು ವರ್ಷದ ಅವಧಿಗೆ ಇವುಗಳ ತಯಾರಿಕೆ, ಸಂಗ್ರಹ, ಸಾಗಣೆ ಮತ್ತು ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಆ. 10ರಂದು ಆದೇಶ ಹೊರಡಿಸಿದೆ.
 ಆದರೆ, ಇದಕ್ಕೆ ಪೂರಕ ಎಂಬಂತೆ ಧಾರವಾಡ ತಾಲೂಕಿನ ಕಟ್ಟಕಡೆಯ ಗ್ರಾಮ ಜೀರಿಗಿವಾಡ ಸೇವಾ ಗ್ರಾಮದಲ್ಲಿ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಮೂರು ವರ್ಷಗಳ ಹಿಂದೇಯೇ ತಂಬಾಕು, ಗುಟ್ಖಾ, ಮದ್ಯ ಮಾರಾಟ ನಿಷೇಧಿಸಿದ್ದಾರೆ. ಈ ಮೂಲಕ ಗ್ರಾಮಸ್ಥರು ಇತರರಿಗೆ ಮಾದರಿಯಾಗಿದ್ದಾರೆ.    
ಇಲ್ಲಿ ನಿತ್ಯ ವಂದೇ ಮಾತರಂ: ಸಂಸತ್ತಿನ ಇತ್ತೀಚಿನ ಮುಂಗಾರು ಅಧಿವೇಶನದಲ್ಲಿ ವಂದೇ ಮಾತರಂ ಕಡ್ಡಾಯ ವಿಧೇಯಕ ಅಂಗೀಕಾರ ಪಡೆದಿದೆ. ಆದರೆ, ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೂರು ವರ್ಷಗಳ ಹಿಂದೆಯೇ ಮಕ್ಕಳಿಂದ ನಿತ್ಯ ವಂದೇ ಮಾತರಂ ಗೀತೆ ಹಾಡಿಸಲಾಗುತ್ತದೆ. 
ಗಾಂಧಿ ತತ್ವ ಪಾಲನೆ: ಮಹಾತ್ಮ ಗಾಂಧಿ ಅವರ ಕಲ್ಪನೆಯ ಸೇವಾಗ್ರಾಮ ತತ್ವವನ್ನು ಇಲ್ಲಿ ಅಕ್ಷರಶಹ ಪಾಲಿಸಲಾಗುತ್ತಿದೆ. ಗ್ರಾಮದ ಏಳಿಗೆಗೆ ಪ್ರತಿಯೊಬ್ಬರೂ ಸೇವಾ ಮನೋಭಾವದಿಂದ ಸೇವೆ ಸಲ್ಲಿಸಬೇಕು ಎಂಬುದು ಸೇವಾಗ್ರಾಮ ಪರಿಕಲ್ಪನೆ. 1500 ಜನಸಂಖ್ಯೆ ಇರುವ ಗ್ರಾಮದ ಯುವಕರು ‘ಕಾಯಕ’ ಸ್ವಸಹಾಯ ಸಂಘದ ಮೂಲಕ ಅಭಿವೃದ್ಧಿ ಕಾರ್ಯ ಹಾಗೂ ಸ್ವಚ್ಛತಾ ಕಾರ್ಯಗಳಲ್ಲಿ ಪ್ರತಿವಾರ ತಪ್ಪದೇ ಪಾಲ್ಗೊಳ್ಳುತ್ತಾರೆ. 

ಮಕ್ಕಳಿಂದ ನಿತ್ಯ ರೈತ ಗೀತೆ

ಶಾಲೆಯಲ್ಲಿ ಮಕ್ಕಳು ಪ್ರಾರ್ಥನೆ ವೇಳೆ ನಾಡಗೀತೆ, ವಂದೇ ಮಾತರಂ, ರಾಷ್ಟ್ರಗೀತೆ ಬಳಿಕ ನಿತ್ಯ ಒಂದು ವಿಶೇಷ ಗೀತೆ ಹಾಡುತ್ತಾರೆ. ಸೋಮವಾರ ‘ರೈತ ಗೀತೆ’, ಮಂಗಳವಾರ ‘ನಿತ್ಯೋತ್ಸವ’, ಬುಧವಾರ ‘ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ’, ಗುರುವಾರ ‘ನಿನ್ನಂತೆ ಆಗಬೇಕು ಕನಕ’, ಶುಕ್ರವಾರ ‘ವಿಶ್ವವಿನೂತನ ವಿದ್ಯಾ ಚೇತನ’, ಶನಿವಾರ ‘ಹನುಮಾನ ಚಾಲೀಸಾ, ರಾಮನ ಹಾಡು’ ಹಾಡುತ್ತಾರೆ. ಜತೆಗೆ ನಿತ್ಯ ಸಂವಿಧಾನ ಪೀಠಿಕೆ ಓದುತ್ತಾರೆ. 
"

ಸರ್ಕಾರ ಈ ಹಿಂದೆಯೇ ಗುಟ್ಖಾ ಮತ್ತು ತಂಬಾಕು ಪದಾರ್ಥಗಳ ಸೇವನೆ, ಮಾರಾಟ ನಿಷೇಧ ಮಾಡಬೇಕಿತ್ತು. ಈಗಲಾದರೂ ಮಾಡಿರುವುದು ಅಭಿನಂದನೀಯ. ಸರ್ಕಾರದ ದೃಢ ನಿರ್ಧಾರ ಶ್ಲಾಘನೀಯ, ಮುಂದಿನ ಪೀಳಿಗೆಯ ಭವಿಷ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಸರ್ಕಾರ ಈ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ಇದು ತಕ್ಷಣದಿಂದಲೇ ಜಾರಿಗೆ ಬರಲಿ. ಪ್ರಭಾಕರ ದೇಶಪಾಂಡೆ ಗ್ರಾಪಂ ಮಾಜಿ ಸದಸ್ಯ

"

ಒಂದರಿಂದ 8ನೇ ತರಗತಿವರೆಗೆ ಇಲ್ಲಿ ತರಗತಿಗಳಿದ್ದು, 86 ಮಕ್ಕಳು ಓದುತ್ತಿದ್ದಾರೆ. ಗ್ರಾಮದಲ್ಲಿ ತಂಬಾಕು, ಗುಟ್ಖಾ, ಮದ್ಯ ಮಾರಾಟ ನಿಷೇಧವಿದೆ. ಸುತ್ತಲಿನ ಅಂಗಡಿಕಾರರಿಗೆ ಅಡಿಕೆ ಚೀಟು ಮಾರಾಟ ಮಾಡದಂತೆ ಮನವಿ ಮಾಡಲಾಗಿದೆ. ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡುವ ನಿಟ್ಟಿನಲ್ಲಿ ಮಕ್ಕಳಿಗೆ ತಿಳಿ ಹೇಳಲಾಗಿದ್ದು, ಎಲ್ಲ ಮಕ್ಕಳು ಸ್ಟೀಲ್ ಬಾಟಲ್ ತರುತ್ತಾರೆ. ಶಾಲೆಯನ್ನು ಗ್ರಾಮಸ್ಥರು ದೇವಸ್ಥಾನದ ರೀತಿಯಲ್ಲಿ ನೋಡುತ್ತಾರೆ. ಚಂಪಾ ನರೇಗಲ್ಲಮುಖ್ಯ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜೀರಿಗಿವಾಡ