DGP Alok kumar 
ಧಾರವಾಡ

ಕೇಂದ್ರ ಕಾರಾಗೃಹಕ್ಕೆ ಡಿಜಿಪಿ ಅಲೋಕ್​ಕುಮಾರ್​ ಭೇಟಿ

ಮಂಜುನಾಥ ಅಂಗಡಿ
ಧಾರವಾಡ: ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಪೊಲೀಸ್​ ಮಹಾನಿರ್ದೇಶಕ ಅಲೋಕ್​ಕುಮಾರ್​ ಅವರು ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಬುಧವಾರ ಭೇಟಿ ನೀಡಿದರು.
ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆ, ಮಾದಕ ವಸ್ತುಗಳ ಪೂರೈಕೆ, ಮೊಬೈಲ್​ ಬಳಕೆ ಸೇರಿ ಇತರ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆ ಕಾರಾಗೃಹಗಳಲ್ಲಿ ಸುಧಾರಣೆ ತರುವ ಉದ್ದೇಶದಿಂದ ಅಲೋಕ್​ಕುಮಾರ್​ ಅವರು ಎಲ್ಲ ಕಾರಾಗೃಹಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ಮೊದಲ ಬಾರಿ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದರು.
ಅವರನ್ನು ಜೈಲು ಸಿಬ್ಬಂದಿ ಹಾಗೂ ಕಮೀಷನರೇಟ್​ ವ್ಯಾಪ್ತಿಯ ಪೊಲೀಸರು ಬರಮಾಡಿಕೊಂಡರು. ನಂತರ ಗೌರವ ವಂದನೆ ಸ್ವೀಕರಿಸಿದ ಅವರು, ಬಂಧಿಖಾನೆ ಸಿಬ್ಬಂದಿಯನ್ನು ಭೇಟಿ ಮಾಡಿ ಕಾರಾಗೃಹದಲ್ಲಿ ಏನಾದರೂ ತೊಂದರೆಗಳಿವೆಯೇ? ಎಂದು ಸಿಬ್ಬಂದಿಯ ಸಮಸ್ಯೆಗಳನ್ನು ಆಲಿಸಿದರು.
ಇದೇವೇಳೆ ಜೈಲು ಮುಖ್ಯದ್ವಾರದ ಬಳಿ ಕೈದಿಗಳು ಮತ್ತು ಅವರ ಸಂಬಂಧಿಕರ ಭೇಟಿಗಾಗಿ ಇರುವ ಸಂದರ್ಶನ ಕೊಠಡಿಗೆ ಭೇಟಿ ನೀಡಿ, ಇಂಟರ್​ಕಾಮ್​ ವ್ಯವಸ್ಥೆಯನ್ನು ಪರಿಶೀಲಿಸಿದರು. ಈವೇಳೆ ಕಾರಾಗೃಹಕ್ಕೆ ಕೈದಿಯನ್ನು ಭೇಟಿ ಮಾಡಲು ಬಂದಿದ್ದ ಸಾರ್ವನಿಕರೊಬ್ಬರನ್ನು ಮಾತನಾಡಿಸಿದರು. ಅಲ್ಲಿಂದ ಕಾರಾಗೃಹದ ಒಳಗೆ ಹೋಗುವ ಮುನ್ನ ಜೈಲು ಸಿಬ್ಬಂದಿಯಿಂದ ಮೆಟಲ್​ ಡಿಟೆಕ್ಟರ್​ ಮೂಲಕ ತಪಾಸಣೆಗೊಳಪಟ್ಟರು.
ಸುಮಾರು 2 ಗಂಟೆ ಕಾಲ ಜೈಲಿನ ಎಲ್ಲ ಸೆಲ್​ಗಳಿಗೆ ಭೇಟಿ ನೀಡಿದರು. ವಿಚಾರಣಾಧೀನ ಹಾಗೂ ಸಜಾಬಂಧಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು.
ಜೈಲು ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರಾಗೃಹಗಳಲ್ಲಿ ಪಾರದರ್ಶಕತೆ, ಶಿಸ್ತು ಕಾಪಾಡುವುದು ಮೊದಲ ಆದ್ಯತೆ. ಜೈಲಿನಲ್ಲಿ ಗಾಂಜಾ, ಡ್ರಗ್ಸ್​, ಮೊಬೈಲ್​ನಂಥ ನಿಷೇಧೀತ ವಸ್ತುಗಳನ್ನು ನಿಯಂತ್ರಿಸಲು ತಾಕೀತು ಮಾಡಲಾಗಿದೆ. ಜೈಲಿನ ನಿಯಮಗಳನ್ನು ಉಲ್ಲಂಘಿಸುವ ಸಿಬ್ಬಂದಿ ಹಾಗೂ ಕೈದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಲಿಸಲಾಗುವುದು. ಜೈಲಿನಲ್ಲಿ ಅಳವಡಿಸಿದ ಜಾಮರ್​ನಿಂದ ಸುತ್ತಲಿನ ನಿವಾಸಿಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಕಾರಾಗೃಹದಲ್ಲಿ ಕೈದಿಗಳಿಗೆ ಮಾನಸಿಕ ಒತ್ತಡ ಹೆಚ್ಚಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಕೈದಿಗಳಲ್ಲಿ ವಿಶ್ವಾಸ ತುಂಬುವ ಕಾರ್ಯ ಮಾಡಲಾಗುವುದು. ಜೈಲಿನಲ್ಲಿ ಕೈದಿಗಳು ಸಮಸ್ಯೆ ಹೇಳಿಲ್ಲ. ಚಿಕಿತ್ಸೆಗಾಗಿ ವೈದ್ಯರ ಕೊರತೆ ಇದ್ದು, ಅದನ್ನು ನೀಗಿಸಲಾಗುವುದು. ಜೈಲಿನಲ್ಲಿರುವ ಅನಕ್ಷರಸ್ಥ ಕೈದಿಗಳಿಗೆ ಎಸ್​ಎಸ್​ಎಲ್​ಸಿವರೆಗೆ ಶಿಕ್ಷಣ ನೀಡುವ ಚಿಂತನೆ ಇದೆ ಎಂದರು.