ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ Airport ಮಹನೀಯರ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿ ಹಮ್ಮಿಕೊಳ್ಳಲಾಗುವ ಪ್ರತಿಭಟನೆಯ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು. 
ಧಾರವಾಡ

Airport ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರಿಡಲು ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ನ. 31 ಅಂತಿಮ ಗಡುವು
  • ಡಿ. 27ಕ್ಕೆ ರಾಜ್ಯಾದ್ಯಂತ ಚಳವಳಿ
ಕುಂದಗೋಳ: ರಾಜ್ಯದ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಿಗೆ Airport ಕನ್ನಡದ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಲು ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ನ. 31 ಅಂತಿಮ ಗಡುವು ನೀಡಿದೆ. ಬೇಡಿಕೆ ಈಡೇರದಿದ್ದರೆ ಡಿ. 27ಕ್ಕೆ ರಾಜ್ಯಾದ್ಯಂತ ಮಹಾ ಚಳವಳಿ ನಡೆಸುವುದಾಗಿ ಸಮಿತಿ ಎಚ್ಚರಿಕೆ ನೀಡಿತು.
ತಾಲೂಕಿನ ಯರಗುಪ್ಪಿ ಗ್ರಾಮದ ಗ್ರಾಮದ ಸಿ.ಎಸ್. ಶಿವಳ್ಳಿ ಸ್ಮಾರಕದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಸಾನ್ನಿಧ್ಯ ವಹಿಸಿದ್ದ ಮನಸೂರ ಮಠದ ಶ್ರೀ ಬಸವರಾಜ ದೇವರು ಮಾತನಾಡಿ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ, ಹುಬ್ಬಳ್ಳಿಗೆ ಸಂಗೊಳ್ಳಿ ರಾಯಣ್ಣ, ವಿಜಯಪುರಕ್ಕೆ ಜಗಜ್ಯೋತಿ ಬಸವೇಶ್ವರರು ಹಾಗೂ ಶಿವಮೊಗ್ಗಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ನಾಮಕರಣ ಮಾಡುವಂತೆ ಕನ್ನಡಪರ ಸಂಘಟನೆಗಳು ಬಹುಕಾಲದಿಂದ ಹೋರಾಟ ನಡೆಸುತ್ತಿವೆ. ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳದ ಕಾರಣ, ಈ ಹೋರಾಟ ಅನಿವಾರ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖಂಡ ಅಡಿವೆಪ್ಪ ಶಿವಳ್ಳಿ ಮಾತನಾಡಿ, ನಾಡು, ನುಡಿಗೆ ಹೋರಾಡಿದ ಮಹನೀಯರ ಹೆಸರಿಡುವ ವಿಚಾರದಲ್ಲಿ ಕೇಂದ್ರ ವಿಳಂಬ ಮಾಡುತ್ತಿರುವುದು ಅಸಮಾಧಾನ ತಂದಿದೆ. ಮುಂದಿನ ಪ್ರತಿಭಟನೆಯಲ್ಲಿ ತಾಲೂಕಿನಿಂದಲೇ 20 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳ ಮೂಲಕ ಜನರು ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಮಾತನಾಡಿರು. ಇದಕ್ಕೂ ಮುನ್ನ ಹೋರಾಟದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಚಂದ್ರಶೇಖರ ಜುಟ್ಟಲ್, ವಿಶಾಲ ಅಬ್ಬಯ್ಯ, ಶಿವಾನಂದ ಪೂಜಾರ, ಅಬ್ದುಲ್ ಮುನಾಫ್ ಐನಾಪೂರ, ಕಲ್ಲಪ್ಪ ಹರಕುಣಿ, ಚಂದ್ರು ಕುರುಬರ, ಶ್ರೀನಿವಾಸ ಬೆಳದಡಿ, ರವಿ ತಡಹಾಳ, ಮುಂಜುನಾಥ ತಡಹಾಳ, ಯಲ್ಲಪ್ಪ ಹಾರೋಗೇರಿ, ಜಗದೀಶ ಸೊಟ್ಟಮ್ಮನವರ, ಯಲ್ಲಪ್ಪ ಕುಂದಗೋಳ, ಫಕೀರೇಶ ನಾಯ್ಕರ, ಇತರರು ಇದ್ದರು.