ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಉದ್ಯೋಗಾಂಕ್ಷಿಗಳ ಪ್ರತಿಭಟನೆ
ಧಾರವಾಡ: ರಾಜ್ಯದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಉದ್ಯೋಗಾಂಕ್ಷಿಗಳು, ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘ (ಅಕ್ಸಾ) ನೇತೃತ್ವದಲ್ಲಿ ನಗರದ ಜುಬಿಲಿ ವೃತ್ತದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಉದ್ಯೋಗಾಂಕ್ಷಿಗಳ ಪ್ರತಿಭಟನೆಗೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ವಿದ್ಯಾರ್ಥಿಗಳ ಹೋರಾಟಕ್ಕೆ ನಮ್ಮ ಬೆಂಬಲವಿದೆ. 2.86 ಲಕ್ಷ ಹುದ್ದೆಗಳು ಖಾಲಿ ಇವೆ. ಅದರಲ್ಲಿ ಸದ್ಯ 55 ಸಾವಿರ ಹುದ್ದೆಗಳನ್ನು ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದರೂ ಸರ್ಕಾರ ಭರ್ತಿ ಮಾಡುತ್ತಿಲ್ಲ. ಹೋರಾಟಕ್ಕಿಳಿದ ವಿದ್ಯಾರ್ಥಿಗಳನ್ನು ಹತ್ತಿಕ್ಕುತ್ತಿದೆ. ಎಲ್ಲಿ ನೋಡಿದರಲ್ಲಿ ಪೊಲೀಸರು ಉದ್ಯೋಗಾಂಕ್ಷಿಗಳನ್ನು ತಡೆಯುತ್ತಿದ್ದಾರೆ. ವಿದ್ಯಾರ್ಥಿಗಳಿರುವ ಕಡೆ ಪೊಲೀಸರು ಇರುತ್ತಾರೆ. ಧಾರವಾಡ ಒಂದು ರೀತಿಯಲ್ಲಿ ಜಮ್ಮು-ಕಾಶ್ಮೀರವಾದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ದೇಶದ ಶಕ್ತಿ. ಹೋರಾಟ ಮುಂದುವರಿಸಬೇಕು. ನಾವು ಸದನದ ಒಳಗೆ ಹೊರಗೆ ಹೋರಾಟ ಮಾಡುತ್ತೇವೆ. ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಕ್ರಮ ಕೈಗೊಳ್ಳದಿದ್ದರೆ ಧಾರವಾಡದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿ ಸರ್ಕಾರಕ್ಕೆ ಬುದ್ಧಿ ಕಲಿಸೋಣ ಎಂದರು.
ಬಿಜೆಪಿ ಯುವ ಮುಖಂಡ ಭರತ ಬೊಮ್ಮಾಯಿ ಮಾತನಾಡಿ, ನಾವು ರಾಜಕೀಯ ಉದ್ದೇಶದಿಂದ ಇಲ್ಲಿ ಮಾತನಾಡುವುದಕ್ಕೆ ಬಂದಿಲ್ಲ. ನಾನೂ ಒಬ್ಬ ಯುವಕ. ಉದ್ಯೋಗಾಂಕ್ಷಿಗಳ ಕಷ್ಟ ಎಷ್ಟಿದೆ ಎಂದು ನನಗೆ ಗೊತ್ತು. ಹುದ್ದೆ ಭರ್ತಿಗೆ ಕ್ರಮ ತೆಗೆದುಕೊಳ್ಳುವವರೆಗೂ ನಾನೂ ಹೋರಾಟ ಮಾಡುತ್ತೇನೆ. ಸರ್ಕಾರ ಕೂಡಲೇ ಹುದ್ದೆಗಳ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಹೋರಾಟದ ನೇತೃತ್ವ ವಹಿಸಿದ್ದ ಸಂಘದ ಕಾಂತಕುಮಾರ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆ ಸಿಎಂಗೆ ಗೊತ್ತಿದೆ. ಮನೆ ಮನೆಗೆ ತರಕಾರಿ ಪೂರೈಕೆ ಮಾಡಿ ಬದುಕುತ್ತಿದ್ದಾರೆ. ಒಂದೇ ಹೊತ್ತು ಊಟ ಮಾಡುತ್ತಿದ್ದಾರೆ. ಹೀಗಾಗಿ ನನ್ನ ಪ್ರಾಣ ಹೋದರೂ ಈ ಹೋರಾಟ ನಿಲ್ಲಿಸುವುದಿಲ್ಲ. ಒಂದು ಲಕ್ಷ ಜನರನ್ನು ಸೇರಿಸಿ ಧಾರವಾಡದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತೇವೆ ಎಂದರು.
ಜಿಲ್ಲಾಧಿಕಾರಿ ಸ್ಥಳಕ್ಕೆ ದೌಡು:
ಪ್ರತಿಭಟನಾ ನಿರತ ಜುಬಿಲಿ ವೃತ್ತಕ್ಕೆ ಆಗಮಿಸಿದ ಜಿಲ್ಲಾಽಕಾರಿ ಸ್ನೇಹಲ್ ಆರ್. ಅವರು ನಿಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ತಲುಪಿಸಿದ್ದೇವೆ. ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಪ್ರತಿಭಟನಾ ನಿರತ ಉದ್ಯೋಗಾಂಕ್ಷಿಯೊಬ್ಬಳು `ನಾನು ಎರಡು ಮಕ್ಕಳನ್ನು ಕಟ್ಟಿಕೊಂಡು ಪ್ರತಿಭಟನೆಗೆ ಬಂದಿದ್ದೇನೆ. ಸಿಎಂ ಬಂದು ಭರವಸೆ ನೀಡಬೇಕು ಎಂದು ಪಟ್ಟು ಹಿಡಿದಳು. ಪೊಲೀಸರು ಸಮಾಧಾನ ಮಾಡಿದರು. ಜಿಲ್ಲಾಽಕಾರಿ ಅವರು ಬಂದು ಹೋದ ಮೇಲೆಯೂ ಸಿಎಂ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಾಗ ಪೊಲೀಸರು, ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಂತಕುಮಾರ್ ಸೇರಿ ಏಳು ಜನರನ್ನು ವಶಕ್ಕೆ ಪಡೆದರು. ಬಳಿಕ ಸ್ಥಳಕ್ಕೆ ಬಂದ ಹೆಚ್ಚಿನ ಪೊಲೀಸರು, ಪ್ರತಿಭಟನಾಕಾರರನ್ನು ಚದುರಿಸಿದರು.
ಹೋರಾಟದ ವೇಳೆ ಉದ್ಯೋಗಾಕಾಂಕ್ಷಿಯೊಬ್ಬರು ಪೊಲೀಸರೊಂದಿಗೆ ವಾಗ್ವಾದ ನಡೆಸಿ, ನಡು ರಸ್ತೆಯಲ್ಲೇ ಬಿದ್ದು ಅತ್ತ ಘಟನೆ ನಡೆಯಿತು. ವಯಸ್ಸು ಮೀರುತ್ತಿದೆ. ಸರ್ಕಾರ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಮನೆಯವರು ಎಷ್ಟು ದಿನ ಅಂತ ನಮ್ಮನ್ನು ದುಡಿದು ಸಾಕಬೇಕು ಎಂದು ಜುಬಿಲಿ ವೃತ್ತದಲ್ಲೇ ಗೋಳಾಡಿದ.