ಧಾರವಾಡ: ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಕಾರ್ಯ ಮುಕ್ತಾಯಗೊಂಡಿದ್ದು, ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಮಳೆ ಬಾರದೆ ಬೆಳೆಗಳು ಒಣಗಿ ಹಾನಿಯಾಗಿದೆ. ರಾಷ್ಟೀಕೃತ ಬ್ಯಾಂಕ್ ಹಾಗೂ ಎಲ್ಲ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗೌಡರ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
2023-24 ಮತ್ತು 2024-25ನೇ ಸಾಲಿನ ಮುಂಗಾರು, ಹಿಂಗಾರು ಬೆಳೆವಿಮೆ ಹಣ ರೈತರ ಖಾತೆಗೆ ಜಮೆಯಾಗಿಲ್ಲ. ತಕ್ಷಣ ಬಿಡುಗಡೆ ಮಾಡಬೇಕು. ಅನೇಕ ವರ್ಷಗಳಿಂದ ಸರ್ಕಾರವು ಬರ ಪರಿಹಾರವೆಂದು ಹೆಕ್ಟೇರ್‌ಗೆ 8,500 ರೂ.ನಂತೆ ಪ್ರತಿ ರೈತರ ಎರಡು ಹೆಕ್ಟೇರ್‌ಗೆ 17 ಸಾವಿರ ರೂ. ನೀಡಲಾಗುತ್ತಿದೆ. ಅದನ್ನು 1 ಲಕ್ಷ ರೂ.ಗೆ ಏರಿಸಬೇಕು ಎಂದು ಆಗ್ರಹಿಸಿದರು.
ಎಕರೆಗೆ 60ರಿಂದ 70 ಸಾವಿರ ರೂ. ಖರ್ಚು ಮಾಡಿ ರೈತರು ಬಿತ್ತನೆ ಮಾಡುತ್ತಾರೆ. ಆದರೆ, ಫಸಲು ಬರುತ್ತಿಲ್ಲ. ಖರ್ಚು ಸಹ ರೈತರಿಗೆ ದಕ್ಕುತ್ತಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಿಕೊಂಡು ರೈತರ ಕಷ್ಟಗಳನ್ನು ಪರಿಹರಿಸಬೇಕು. ಬಿಡದಿಯಲ್ಲಿ ಟೌನ್‌ಶಿಪ್ ಮಾಡುವುದಕ್ಕೆ ರಾಮನಗರ ರೈತರ ಆಸ್ತಿ ಪಡೆಯಲಾಗುತ್ತಿದೆ. ಸರ್ಕಾರ ಈ ಯೋಜನೆ ಕೈ ಬಿಡಬೇಕು ಎಂದು ಮನವಿ ಮಾಡಿದರು.
ಶಿವನಗೌಡ ಪಾಟೀಲ, ಶಿವಮ್ಮ ಹಡಪದ, ವಿಠಲ ಹರಿಜನ್, ಪ್ರವೀಣ ಕುರಬರ್, ಚಂದ್ರೇಗೌಡ ದಸ್ತಿ, ಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.