ಡಾ. ಟಿ.ಎನ್. ಪ್ರಕಾಶ ಕಮ್ಮರಡಿ
ಧಾರವಾಡ: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯಗಳಿಗೆ ಕಾಯಂ ಕುಲಪತಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಕುಲಪತಿ ಆಯ್ಕೆಗಾಗಿ ರಚಿಸಲಾದ ಶೋಧನಾ ಸಮಿತಿಗಳ ಅಧ್ಯಕ್ಷರ ವಿರುದ್ಧ ಗಂಭೀರ ಆರೋಪಗಳಿವೆ. ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರು ಪರಿಶೀಲಿಸಬೇಕು ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಟಿ.ಎನ್. ಪ್ರಕಾಶ ಕಮ್ಮರಡಿ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸರ್ಕಾರ ಧಾರವಾಡ ಕೃಷಿ ವಿವಿಗೆ ಡಾ. ರಾಜೇಂದ್ರ ಪ್ರಸಾದ್ ಹಾಗೂ ಶಿವಮೊಗ್ಗ ವಿವಿಗೆ ಡಾ. ಸುರೇಶ ಅವರನ್ನು ಶೋಧನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಆದರೆ, ಅದೇ ವಿವಿಗಳಲ್ಲಿ ಸೇವೆ ಸಲ್ಲಿಸಿದವರಾಗಿದ್ದು, ಇದು ಯುಜಿಸಿ ನಿಯಮಾವಳಿಗೆ ತದ್ವಿರುದ್ಧವಾಗಿದೆ. ಇವರ ವಿರುದ್ಧದ ಅನೇಕ ಆರೋಪಗಳ ಬಗ್ಗೆ ಕೃಷಿ ವಿವಿಗಳ ನಿವೃತ್ತ ಪ್ರಾಧ್ಯಾಪಕರು, ಹಳೆಯ ವಿದ್ಯಾಥಿರ್ಗಳ ಒಕ್ಕೂಟ ರಾಜ್ಯಪಾಲ ಹಾಗೂ ಸರ್ಕಾರದ ಗಮನಕ್ಕೆ ತರಲಾಗಿದೆ. ಲೋಕಾಯುಕ್ತಕ್ಕೂ ದೂರು ಸಲ್ಲಿಸಲಾಗಿದೆ. ಈ ಸಂಬಂಧ ವಿಧಾನಸಭೆ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಮೇ 23ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಶೋಧನಾ ಸಮಿತಿಯನ್ನು ಮರುಪರಿಶೀಲಿಸಲು ಆಗ್ರಹಿಸಿದ್ದಾರೆ ಎಂದರು.
ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಎರಡೂ ವಿವಿಗಳ ಕುಲಪತಿ ಆಯ್ಕೆಯಾಗಿ ಜು. 3ರಂದು ಸಮಿತಿಯ ಸಭೆ ನಡೆಸುವಂತೆ ರಾಜ್ಯಪಾಲರು ದಿನಾಂಕ ನಿಗದಿ ಮಾಡಿದ್ದಾರೆ. ಈ ಮಧ್ಯೆ ಕೃಷಿ ಸಚಿವರೇ ಇಲ್ಲದಿದ್ದರೂ ತರಾತುರಿ ಅನೇಕ ಸಂಶಯಗಳನ್ನು ಹುಟ್ಟು ಹಾಕಿದೆ. ಆದ್ದರಿಂದ ಶೋಧನಾ ಸಮಿತಿಗಳನ್ನು ರದ್ದುಗೊಳಿಸಬೇಕು ಎಂದು ಕಮ್ಮರಡಿ ಆಗ್ರಹಿಸಿದರು.