ಎಐಕೆಕೆಎಂಎಸ್ ನಿಂದ ಪ್ರತಿಭಟನೆ
ಧಾರವಾಡ: ಸಮರ್ಪಕವಾಗಿ ರಸಗೊಬ್ಬರ, ಬೀಜ ಪೂರೈಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ (ಎಐಕೆಕೆಎಂಎಸ್) ಸಂಘಟನೆಯಿಂದ ನಗರದ ಜಿಲ್ಲಾಽಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧವಿಲ್ಲದೆ ಪೆಟ್ರೋಲ್, ಡೀಸೆಲ್ ಪೂರೈಕೆ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ರೈತರಿಗೆ ೫ ಲಕ್ಷ ರೂ. ವರೆಗೆ ಸಾಲ ನೀಡುವ ಘೋಷಣೆ ಜಾರಿಗೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ ಮಾತನಾಡಿ, ರಾಜ್ಯದಾದ್ಯಂತ ಮುಂಗಾರು ಚಟುವಟಿಕೆ ಚುರುಕುಗೊಳ್ಳುತ್ತಿದೆ. ಆದರೆ, ಪ್ರತಿ ಬಾರಿಯಂತೆ ಈ ಬಾರಿಯೂ ಬೀಜ, ರಸ ಗೊಬ್ಬರ ಪಡೆಯಲು ರೈತ ಸಮುದಾಯ ಹರಸಾಹಸ ಪಡುತ್ತಿದೆ. ಸಮಯಕ್ಕೆ ಸರಿಯಾಗಿ ಬೀಜ, ಗೊಬ್ಬರ ಸಿಗದಿದ್ದರೆ ವರ್ಷದ ಬೆಳೆಯು ಕೈಗೆ ಸಿಗುವುದಿಲ್ಲ. ಉತ್ಪಾದನೆ ಸಮರ್ಪಕವಾಗಿ ಆಗುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯವಿರುವ ಯೂರಿಯಾ ಡಿಎಪಿ ಗೊಬ್ಬರ ಮತ್ತು ಬೀಜ ಪೂರೈಸಲು ಸಂಪೂರ್ಣ ವಿಫಲವಾಗಿವೆ ಎಂದರು.
ಕೂಡಲೇ ಸಮರ್ಪಕವಾಗಿ ಬೀಜ, ರಸಗೊಬ್ಬರ ಪೂರೈಕೆ ಮಾಡಬೇಕು. ಕೃತಕ ಅಭಾವ ಸೃಷ್ಟಿ ಮಾಡಿ ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ರಸಗೊಬ್ಬರವನ್ನು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಽಸಬೇಕು. ಗೊಬ್ಬರಕ್ಕೆ ಲಿಂಕ್ ಆಗಿ ಜಿಂಕ್ ನೀಡುವುದನ್ನು ತಪ್ಪಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ನಿರ್ಬಂಧವಿಲ್ಲದೆ ರೈತರಿಗೆ ಕೃಷಿ ಚಟುವಟಿಕೆಗಾಗಿ ಪೆಟ್ರೋಲ್, ಡೀಸೆಲ್ ವಿತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘಟನೆಯ ಧಾರವಾಡ ತಾಲೂಕು ಕಾರ್ಯದರ್ಶಿ ಗೋವಿಂದ ಕೃಷ್ಣಪ್ಪನವರ, ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ, ಸಮಿತಿ ಸದಸ್ಯ ಕಲ್ಲಪ್ಪ ಮೂಷಣ್ಣವರ, ವಿಜಯಲಕ್ಷ್ಮಿ ನಿಕ್ಕಮ್, ಹುಸೇನ್ ಸಾಬ್, ರುಕುಮವ್ವ ಇತರರಿದ್ದರು.