ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ಸಮರ್ಪಕವಾಗಿ ಬಸ್ (Bus) ನಿಲುಗಡೆ ಆಗುತ್ತಿಲ್ಲ ಎಂದು ಆರೋಪಿಸಿ ಗುರುವಾರ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಉಪ್ಪಿನಬೆಟಗೇರಿ: ಸಮಯಕ್ಕೆ ಸರಿಯಾಗಿ ಹಾಗೂ ಹೆಚ್ಚುವರಿ ಬಸ್ (Bus) ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
‘ತಡಕೋಡ ಗ್ರಾಮಕ್ಕೆ ಬೈಲಹೊಂಗಲ, ಧಾರವಾಡ ಸೇರಿದಂತೆ ಇತರ ಬಸ್ ಬಂದರೂ ಅವುಗಳಲ್ಲಿ ನಿಲ್ಲುವಷ್ಟೂ ಜಾಗವಿರುವುದಿಲ್ಲ. ಕೆಲ ಬಸ್‌ಗಳ ಚಾಲಕ ಹಾಗೂ ನಿರ್ವಾಹಕರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ನಿಲ್ದಾಣ ಬಿಟ್ಟು ದೂರದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಾರೆ ಹೊರತು ಹತ್ತಿಸಿಕೊಳ್ಳದೆ ಹೋಗುತ್ತಾರೆ. ಹೀಗಾಗಿ ತಡಕೋಡ ಗ್ರಾಮಕ್ಕೆ ಪ್ರತ್ಯೇಕವಾಗಿ ಹೆಚ್ಚುವರಿ ಬಸ್‌ಗಳ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತಡಕೋಡ ಬಸ್ ನಿಲ್ದಾಣದಲ್ಲೇ ವಿದ್ಯಾರ್ಥಿಗಳು ಬಸ್‌ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆ 8 ಗಂಟೆಯಿಂದ ಬೈಲಹೊಂಗಲ, ಕಿತ್ತೂರ, ಧಾರವಾಡ ಸೇರಿದಂತೆ ಸುಮಾರು 6 ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡದ ವಿದ್ಯಾರ್ಥಿಗಳು ಸಮಸ್ಯೆ ಬಗೆಹರಿಸುವವರೆಗೆ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗುತ್ತದೆ ಎಂದು ಪಟ್ಟು ಹಿಡಿದರು.
ಸ್ಥಳಕ್ಕಾಗಮಿಸಿದ ಗರಗ ಪಿಎಸ್‌ಐ ಸಿದ್ರಾಮಪ್ಪ ಉನ್ನದ, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ನಂತರ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.