decision ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಬಾಕಿ ಉಳಿದಿರುವ 814 ಚಾಲಕ ಮತ್ತು ನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ಸಾಮಾಜಿಕ ಹೋರಾಟಗಾರ ಸುಭಾಷಸಿಂಗ್ ಜಮಾದಾರ ನೇತೃತ್ವದಲ್ಲಿ ಹುಬ್ಬಳ್ಳಿಯ ಅಂಬೇಡ್ಕರ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದರು
- ವಾಯವ್ಯ ಸಾರಿಗೆ ಸಂಸ್ಥೆ ಚಾಲಕ, ನಿರ್ವಾಹಕ ಉದ್ಯೋಗಾಕಾಂಕ್ಷಿಗಳಿಂದ ಪ್ರತಿಭಟನೆ
- ಹಿಂದಿನ ಸಚಿವರಾದ ರಾಮಲಿಂಗಾ ರೆಡ್ಡಿ ಹುದ್ದೆಗಳ ಭರ್ತಿಗೆ ಭರವಸೆ ನೀಡಿದ್ದರು.
- ಆಗಷ್ಟ್ 4 ರಂದು ನ್ಯಾಯಾಲಯದಲ್ಲಿ ವಿಚಾರಣೆ ಇದೆ.
ಹುಬ್ಬಳ್ಳಿ :
decision ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಬಾಕಿ ಇರುವ 814 ಚಾಲಕ ಮತ್ತು ನಿರ್ವಾಹಕ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿಕೊಳ್ಳುವಂತೆ ಆಗ್ರಹಿಸಿ,ನಡೆಸುತ್ತಿರುವ ಹೋರಾಟವನ್ನು ಆಗಷ್ಟ್ 4 ರಿಂದ ಮುಂದುವರೆಸಲು ಉದ್ಯೋಗಾಕಾಂಕ್ಷಿಗಳು ನಿರ್ಧರಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಸುಭಾಷಸಿಂಗ್ ಜಮಾದಾರ ನೇತೃತ್ವದಲ್ಲಿ ಇಲ್ಲಿನ ಸ್ಟೇಶನ್ ರಸ್ತೆಯ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಉದ್ಯೋಗಾಕಾಂಕ್ಷಿಗಳು, ಸರ್ಕಾರಿ ಹುದ್ದೆಗೆ ಬೇಕಾದ ವಯಸ್ಸು ಕೆಲವರಿಗೆ ಮೀರುವ ಹಂತದಲ್ಲಿದ್ದರೆ, ಇನ್ನೂ ಕೆಲವರಿಗೆ ವಯಸ್ಸು ಮೀರಿದೆ. ಹೀಗಾಗಿ, ವಿಶೇಷ ಆಧಾರದಡಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ವಾಯವ್ಯ ಸಾರಿಗೆ ಸಂಸ್ಥೆ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸದಂತೆ ಸಂಸ್ಥೆಯ ಮುಖ್ಯಸ್ಥರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.
ಆಗಷ್ಟ್ 4 ರಂದು ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಈ ಸಂದರ್ಭದಲ್ಲಿ ತಡೆಯಾಜ್ಞೆ ತೆರವುಗೊಳಿಸಿ, ಸಂಸ್ಥೆಯ ಎದುರು ನಿರಂತರ ಹೋರಾಟ ನಡೆಸಲಾಗುವದು ಎಂದು ಸುಭಾಷಸಿಂಗ್ ಜಮಾದಾರ ಇದೇ ಸಂದರ್ಭದಲ್ಲಿ ಹೇಳಿದರು.
ರಾಜ್ಯ ಸರ್ಕಾರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ನಿರಂತರ ಪ್ರತಿಭಟನೆ ನಡೆಸಲು ಅಂಬೇಡ್ಕರ ವೃತ್ತದಲ್ಲಿ ಅವಕಾಶ ನೀಡುತ್ತಿಲ್ಲ ಎಂದು ದೂರಿದರು.
2019ರಲ್ಲಿ ಅಂದಿನ ರಾಜ್ಯ ಸರ್ಕಾರ 2,814 ಚಾಲಕ ಮತ್ತು ನಿರ್ವಾಹಕರ ಹುದ್ದೆಗಳಿಗೆ ಅರ್ಜಿ ಕರೆದು, ಕೇವಲ 1 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಂಡಿತ್ತು.
ಇನ್ನುಳಿದ ಹುದ್ದೆಗಳಿಗೆ ಹೋರಾಟ ನಡೆಸಿದ ನಂತರ ಕಳೆದ ವರ್ಷ ಮತ್ತೊಂದು ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದೆ. ಬಾಕಿ ಉಳಿದಿರುವ 814 ಹುದ್ದೆಗಳನ್ನು ಸಹ ಭರ್ತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಹಿಂದಿನ ಸಚಿವರಾದ ರಾಮಲಿಂಗಾ ರೆಡ್ಡಿ ಹುದ್ದೆಗಳ ಭರ್ತಿಗೆ ಭರವಸೆ ನೀಡಿದ್ದರು. ಆದರೆ, ಕೆಲ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ನೇಮಕಾತಿ ನಡೆಯಲಿಲ್ಲ. ಅಷ್ಟರಲ್ಲಿ ಸಚಿವರ ಖಾತೆಯೂ ಬದಲಾಯಿತು ಎಂದರು.
ಈ ಕುರಿತು ಶೀಘ್ರ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನು ಉದ್ಯೋಗಾಕಾಂಕ್ಷಿಗಳ ನಿಯೋಗದೊಂದಿಗೆ ಭೇಟಿ ಮಾಡಲಾಗುವುದು ಎಂದು ಹೇಳಿದರು.
ಉದ್ಯೋಗಾಕಾಂಕ್ಷಿಗಳಾದ ವಿವೇಕಾನಂದ ಸ್ವಾಮಿ, ದೇವರಾಜ ಎಚ್.ಎಚ್. ಶಿವು ತಳವಾರ, ಬಾಹುಬಲಿ ಟೇಕನ್ನವರ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.