ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿಯಿಂದ ಪ್ರತಿಭಟನೆ  
ಧಾರವಾಡ

ಡಿಡಿಪಿಯು ಆಡಳಿತಾತ್ಮಕ ನಿಯಂತ್ರಣ ಜಿಪಂ ಸಿಇಒಗೆ ನೀಡಬೇಡಿ

ಧಾರವಾಡ: ಶಾಲಾ ಶಿಕ್ಷಣ ಇಲಾಖೆ (ಪಪೂ) ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಪಂ ಸಿಇಒ ಅವರಿಗೆ ವರ್ಗಾಹಿಸಬೇಕೆನ್ನುವ ಪ್ರಸ್ತಾವನೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪಪೂ ಕಾಲೇಜುಗಳ ಉಪನ್ಯಾಸಕರ ಸಂಘ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ಕಾಲೇಜುಗಳ ಪ್ರಾಂಶುಪಾಲರ ಸಂಘದ ನೇತೃತ್ವದಲ್ಲಿ ಪಪೂ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಯು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪಪೂ ಶಿಕ್ಷಣ ಇಲಾಖೆಯಲ್ಲಿದ್ದ ಪರೀಕ್ಷಾ ವಿಭಾಗವನ್ನು ಈ ಹಿಂದಿನಂತೆ ಪಪೂ ಶಿಕ್ಷಣ ಇಲಾಖೆ ನಿರ್ದೇಶನಾಲಯಕ್ಕೆ ಮರಳಿ ವರ್ಗಾಯಿಸಬೇಕು. ಮೂರು ವರ್ಷಗಳಿಂದ ಪರಿಷ್ಕರಣೆಗೊಳ್ಳದಿರುವ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಭತ್ಯೆ ಹಾಗೂ ಪರೀಕ್ಷಾ ಸಂಭಾವನೆ ತಕ್ಷಣ ಪರಿಷ್ಕರಿಸಿ ಹಿಂದಿನ ವರ್ಷದ ಬಾಕಿ ಇರುವ ಸಂಭಾವನೆಗಳನ್ನು ತಕ್ಷಣ ಪಾವತಿಸಬೇಕು. ಕಾರ್ಯಭಾರದ ಕೊರತೆ ಇರುವ ಅನುದಾನಿತ ಪಪೂ ಕಾಲೇಜುಗಳ ಉಪನ್ಯಾಸಕರನ್ನು ಸೇವೆಯಿಂದ ವಿಮುಕ್ತಗೊಳಿಸುವ ಆದೇಶವನ್ನು ಹಿಂಪಡೆದು, ಅವರಿಗೆ ಸಮೀಪದ ಸರ್ಕಾರಿ ಪಪೂ ಕಾಲೇಜುಗಳಲ್ಲಿ ಕಾರ್ಯಭಾರ ನೀಡುವ ಕುರಿತು ಸಲ್ಲಿಸಲಾದ ಪ್ರಸ್ತಾವನೆಗೆ ಅನುಮೋದನೆ ನೀಡಬೇಕು. ಸರ್ಕಾರಿ ಪಪೂ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಹಾಗೂ ಪಧೋನ್ನತಿ ಹೊಂದಿದ ಪ್ರಾಂಶುಪಾಲರುಗಳ ಸ್ಥಳ ನಿಯುಕ್ತಿಯ ಸಂದರ್ಭದಲ್ಲಿ ಎಲ್ಲ ಖಾಲಿ ಹುದ್ದೆಗಳನ್ನು ಯಾವುದೇ ನಿರ್ಬಂಧವಿಲ್ಲದೆ ಆಯ್ಕೆ ಮಾಡಲು ಮುಕ್ತ ಅವಕಾಶ ನೀಡಬೇಕು. ಪಪೂ ಶಿಕ್ಷಣ ಇಲಾಖೆಯಲ್ಲಿ ಪರೀಕ್ಷೆ ಮತ್ತು ಶೈಕ್ಷಣಿಕ ಸುಧಾರಣೆಗಳನ್ನು ತರಲು ಅಕಾಡೆಮಿ ಕೌನ್ಸಿಲ್ ಸಮಿತಿಯನ್ನು ಉನ್ನತ ಶಿಕ್ಷಣ ಇಲಾಖೆಯಲ್ಲಿರುವಂತೆ ರಚಿಸಬೇಕು. ಕೆಪಿಎಸ್ ಶಾಲೆಗಳ ಆಡಳಿತಾತ್ಮಕ ಮತ್ತು ಆರ್ಥಿಕ ಸಂಪೂರ್ಣ ಅಧಿಕಾರವನ್ನು ಆ ಕಾಲೇಜಿನ ಪ್ರಾಂಶುಪಾಲರಿಗೆ ನೀಡಬೇಕು. 2006ರ ಏ.1ರ ನಂತರ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಿಗೆ ಆಯ್ಕೆಯಾಗಿರುವ ಉಪನ್ಯಾಸಕರಿಗೆ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ಡಿ. ಹನುಮಂತಪ್ಪ, ಜಿ.ಬಿ. ತಹಶೀಲ್ದಾರ್, ಸಂದೀಪ ಬೂದಿಹಾಳ, ಆರ್.ಕೆ ರಂಗಣ್ಣವರ, ಎಲ್. ಎಸ್. ಶೇಖರಗೋಳ ಇತರರಿದ್ದರು.