ಹುಬ್ಬಳ್ಳಿಯ 28 ಕರ್ನಾಟಕ (ncc) ಬಟಾಲಿಯನ್ ಎನ್ಸಿಸಿ ಘಟಕಕ್ಕೆ ಏರ್ ಕಮೊಡೋರ್ ಎಸ್.ಬಿ. ಅರುಣಕುಮಾರ್ ಭೇಟಿ ನೀಡಿದರು.
ಹುಬ್ಬಳ್ಳಿ: ಎನ್ಸಿಸಿ ಕರ್ನಾಟಕ (ncc) ಮತ್ತು ಗೋವಾ ನಿರ್ದೇಶನಾಲಯದ ಉಪ ಮಹಾನಿರ್ದೇಶಕ (ಡಿಡಿಜಿ) ಏರ್ ಕಾಮೊಡೋರ್ ಎಸ್.ಬಿ. ಅರುಣಕುಮಾರ್ ಅವರು ಮಂಗಳವಾರ ಇಲ್ಲಿಯ 28 ಕರ್ನಾಟಕ ಬಟಾಲಿಯನ್ ಎನ್ಸಿಸಿ ಘಟಕಕ್ಕೆ ಭೇಟಿ ನೀಡಿದರು.
ಬೆಳಗಾವಿ ಗ್ರುಪ್ ಕಮಾಂಡರ್ ಅವರೊಂದಿಗೆ ಆಗಮಿಸಿದ ಡಿಡಿಜಿ ಅವರು, ಲೆಫ್ಟಿನೆಂಟ್ ಕರ್ನಲ್ ಜಸ್ದೀಪ್ ಸಿಂಗ್ ಅವರ ನೇತೃತ್ವದ ಬಟಾಲಿಯನ್ ಅನ್ನು ಸಮಗ್ರವಾಗಿ ಪರಿಶೀಲಿಸಿದರು. ಈ ಘಟಕಕ್ಕೆ ನೀಡಿದ ಮೊದಲ ಭೇಟಿಯಲ್ಲಿ ಅವರು ಬಟಾಲಿಯನ್ನ ಸಾಧನೆ ಮತ್ತು ನಿರಂತರ ಪ್ರಗತಿಯನ್ನು ಕಂಡು ಹರ್ಷ ವ್ಯಕ್ತಪಡಿಸಿದರು.
ಸಮರ್ಪಣಾಭಾವ ಮತ್ತು ಶಿಸ್ತು ಎಂಬ ಮೌಲ್ಯಗಳಿಂದ ಸಾಧನೆ ಸಾಧ್ಯವಾಗುತ್ತದೆ. ಭವಿಷ್ಯದ ನಾಯಕರನ್ನು ರೂಪಿಸುವಲ್ಲಿ ಕಮಾಂಡಿಂಗ್ ಅಧಿಕಾರಿಗಳು ಮತ್ತು ಸೂಚನಾ ಸಿಬ್ಬಂದಿ (ಪಿಐ ಸ್ಟಾಫ್) ತೋರುತ್ತಿರುವ ನಿಸ್ವಾರ್ಥ ಸೇವೆ ಮತ್ತು ಪರಿಶ್ರಮವನ್ನು ಅರುಣಕುಮಾರ್ ಪ್ರಶಂಸಿಸಿದರು.
ಅಸೋಸಿಯೇಟ್ ಎನ್ಸಿಸಿ ಅಧಿಕಾರಿಗಳು (ಎಎನ್ಒ) ಮತ್ತು ಕೇರ್ ಟೇಕರ್ ಅಧಿಕಾರಿಗಳು (ಸಿಟಿಒ) ನೀಡುತ್ತಿರುವ ಸೇವೆಯು ಎನ್ಸಿಸಿ ಕಂಪನಿಯ ಬೆನ್ನೆಲುಬು ಎಂದರು.
ಬಟಾಲಿಯನ್ ಕಮಾಂಡಿಂಗ್ ಅಧಿಕಾರಿ, ಆಡ್ಮಿನಿಸ್ಟ್ರೇಷನ್ ಅಧಿಕಾರಿ, ಎಎನ್ಒಗಳು, ಸಿಟಿಒಗಳು, ಸುಬೆದಾರ್ ಮೇಜರ್ ಮತ್ತು ಪಿಐ ಸಿಬ್ಬಂದಿ ಹಾಜರಿದ್ದರು.