ಪಾರದರ್ಶಕ ಸಮೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ 
ಧಾರವಾಡ

ಆಲಿಕಲ್ಲು ಮಳೆ ಹಾನಿಯ ಪಾರದರ್ಶಕ ಸಮೀಕ್ಷೆಗೆ ಸೂಚನೆ

ಧಾರವಾಡ: ಜಿಲ್ಲೆಯಲ್ಲಿ ಕಳೆದ 11 ವರ್ಷಗಳ ನಂತರ ಮಾರ್ಚ್​ನಲ್ಲಿ ಆಲಿಕಲ್ಲು ಮಳೆಯಾಗಿದೆ. ಇದರಿಂದ ಕಲಟಗಿ, ಹುಬ್ಬಳ್ಳಿ, ನವಲಗುಂದ ತಾಲೂಕುಗಳಲ್ಲಿ ಜಾನುವಾರು, ಮನೆ ಮತ್ತು ಬೆಳೆ ಹಾನಿ ಆಗಿರುವ ವರದಿಯಾಗಿದೆ. ಸಂಬಂಧಿಸಿದ ತಾಲೂಕುಗಳ ಅಧಿಕಾರಿಗಳು ಪಾರದರ್ಶಕವಾಗಿ ಜಂಟಿ ಸಮೀಕ್ಷೆ ಮಾಡಿ, ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್​ ಆರ್​. ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು.
ಆಲಿಕಲ್ಲು ಮಳೆಯಿಂದ ಕಲಟಗಿ ತಾಲೂಕಿನ ಮಾಚಾಪುರ ಗ್ರಾಮ ಸುತ್ತಮುತ್ತ ಸುಮಾರು 5ರಿಂದ 8 ಕಿ.ಮೀ ವ್ಯಾಪ್ತಿಯಲ್ಲಿ ಮನೆ, ಜಾನುವಾರು ಮತ್ತು ಬೆಳೆ ಹಾನಿ ಆಗಿರುವ ವರದಿಯಾಗಿದೆ. ಸ್ಥಳಿಯ ಅಧಿಕಾರಿಗಳು ಈಗಾಗಲೇ ಹಾನಿ ಪ್ರದೇಶ ಅಂದಾಜಿಸಿದ್ದಾರೆ. ಕಂದಾಯ, ಕಷಿ, ತೋಟಗಾರಿಕೆ, ಪಂಚಾಯತ್​ ರಾಜ್​ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಬೇಕು. ದೂರು ಬರದಂತೆ ಪಾರದರ್ಶಕ ಸಮೀಕ್ಷೆ ನಡೆಸಬೇಕು ಎಂದರು.
ಮಾ. 20 ಮತ್ತು 21ರಂದು ಜಿಲ್ಲೆಯಲ್ಲಿ ಮಳೆ, ಗುಡುಗು, ಸಿಡಿಲು, ಮಿಂಚು ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್ಲ ಹಂತದ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಉಪ ವಿಭಾಗಾಧಿಕಾರಿ ಶಾಲಂ ಹುಸೇನ್​, ಜಿ.ಪಂ. ಉಪ ಕಾರ್ಯದಶಿರ್ ಮಲ್ಲಿಕಾರ್ಜುನ ತೊದಲಬಾಗಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು, ಉಪಸ್ಥಿತರಿದ್ದರು.