ಹುಬ್ಬಳ್ಳಿಯ ವಿದ್ಯಾನಗರ ಡಾ. ಎಂ.ವಿ. ಮಿಣಜಿಗಿ ಆರ್ಟ್​ ಗ್ಯಾಲರಿಯಲ್ಲಿ ದಸರಾ ನಿಮಿತ್ತ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನವನ್ನು ಮಹಾನಗರ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಸದಾನಂದ ಡಂಗನವರ ಉದ್ಘಾಟಿಸಿ ವೀಕ್ಷಿಸಿದರು. ಡಾ. ಲಿಂಗರಾಜ ಅಂಗಡಿ, ಡಾ. ಕೆ.ಜಿ. ಬ್ಯಾಕೋಡಿ, ಆರ್​.ಬಿ. ಗರಗ, ಇತರರು ಇದ್ದರು. 
ಧಾರವಾಡ

ಗಮನ ಸೆಳೆದ ದಸರಾ ಚಿತ್ರಕಲಾ ಪ್ರದರ್ಶನ

ಹುಬ್ಬಳ್ಳಿಯ ಆರ್ಟ್​ ಗ್ಯಾಲರಿಯಲ್ಲಿ 20ಕ್ಕೂ ಹೆಚ್ಚು ಕಲಾವಿದರು ಭಾಗಿ

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಡಾ. ಎಂ.ವಿ. ಮಿಣಜಿಗಿ ಆರ್ಟ್​ ಗ್ಯಾಲರಿಯಲ್ಲಿ ದಸರಾ ಹಬ್ಬದ ನಿಮಿತ್ತ ಏರ್ಪಡಿಸಿರುವ ವಿವಿಧ ಕಲಾವಿದರ ಚಿತ್ರಕಲಾ ಪ್ರದರ್ಶನ ನೋಡುಗರ ಗಮನ ಸೆಳೆಯುತ್ತಿದೆ.

20ಕ್ಕೂ ಹೆಚ್ಚು ಕಲಾವಿದರು ದಸರಾ ಹಾಗೂ ದುರ್ಗಾದೇವಿಯ ಕುರಿತು ಬರೆದ ಚಿತ್ರಕಲೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅಕ್ಟೋಬರ್​ 28ರ ವರೆಗೆ ನಡೆಯಲಿರುವ ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಮಹಾನಗರ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಸದಾನಂದ ಡಂಗನವರ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಕಲಾವಿದರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಮೂರ್ತಿಗಳು, ಚಿತ್ರಕಲೆ ಕಣ್ಮನ ಸೆಳೆಯುವಂತಿವೆ. ಮಣ್ಣಿನಲ್ಲಿ ತಯಾರಿಸಿದ ದುರ್ಗಾಮಾತೆಯ ವಿಗ್ರಹ ತುಂಬಾ ಸುಂದರವಾಗಿ ಮೂಡಿಬಂದಿದೆ ಎಂದರು.

ದುಷ್ಟಶಕ್ತಿಯನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸುವ ಕಾರ್ಯವನ್ನು ತಾಯಿ ದುರ್ಗಾಮಾತೆ ಮಾಡುತ್ತಾಳೆ. ನವರಾತ್ರಿ ಸಂದರ್ಭದಲ್ಲಿ ದೇವಿ ಆರಾಧನೆ ಮಾಡಲಾಗುತ್ತದೆ. ಇಂತಹ ದೇವಿಯ ಕುರಿತು ಚಿತ್ರಕಲೆ ಬಿಡಿಸಿದ ಕಲಾವಿದರ ಪರಿಶ್ರಮ ಶ್ಲಾಘನೀಯ ಎಂದರು.

ಅತಿಥಿಗಳಾಗಿದ್ದ ಕೆಎಂಸಿಆರ್​ಐ ಸರ್ಜನ್​ ಡಾ. ಕೆ.ಜಿ. ಬ್ಯಾಕೋಡಿ ಮಾತನಾಡಿ, ನವರಾತ್ರಿಯ ಈ ದಿನ ಸುಂದರವಾದ ಕಲೆಯನ್ನು ವೀಸುವ ಅವಕಾಶ ಲಭಿಸಿರುವುದು ಪುಣ್ಯದ ಕೆಲಸ. ಆರ್ಟ್​ ಗ್ಯಾಲರಿಯ ಒಳಗಡೆ ನೋಡಿದಾಗ ತುಂಬಾ ಸಂತೋಷವೆನಿಸುತ್ತದೆ. ಕಲಾವಿದರ ಕೈಯಲ್ಲಿ ಅರಳಿದ ಕಲಾಕೃತಿಗಳು ಅಮೋಘವಾಗಿವೆ ಎಂದರು.

ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಕಲೆಯು ಸಮಯವನ್ನು ಬೇಡುವಂಥದ್ದು. ಕಲಾವಿದರಿಂದ ಮೂಡಿ ಬಂದಿರುವ ಇಲ್ಲಿನ ಕಲೆಯು ರಾಷ್ಟ್ರೀಯ ಭಾವೈಕ್ಯವನ್ನು ಮೂಡಿಸುವಂತಿದೆ. ಸಾರ್ವಜನಿಕರು ಇಂತಹ ಪ್ರದರ್ಶನವನ್ನು ವೀಕ್ಷಣೆ ಮಾಡಬೇಕು. ಕಲಾಕೃತಿಗಳನ್ನು ಖರೀದಿ ಮಾಡುವ ಅವಕಾಶವೂ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಂಚಬ್ರಹ್ಮ ಮಿಣಜಿಗಿ ಆರ್ಟ್​ ಗ್ಯಾಲರಿ ಸಮಿತಿ ಅಧ್ಯಕ್ಷ ಆರ್​.ಬಿ. ಗರಗ ಮಾತನಾಡಿ, ಕಲಾವಿದರನ್ನು ಗೌರವದಿಂದ ನೋಡುವುದು ತುಂಬಾ ಮುಖ್ಯವಾಗಿದೆ. ದಸರಾ ಉತ್ಸವದಲ್ಲಿ ವಿವಿಧ ರೀತಿಯ ಕಲಾಕೃತಿಗಳು ವೀಕ್ಷಣೆಗೆ ಬಂದಿರುವುದು ಸಂತೋಷದ ಸಂಗತಿ. ಹಿರಿಯ ಕಿರಿಯ ಎಲ್ಲ ರೀತಿಯ ಕಲಾವಿದರು ಇಲ್ಲಿ ಭಾಗವಹಿಸಿದ್ದಾರೆ ಎಂದರು.

ನವದುರ್ಗೆಯ ಅನೇಕ ರೂಪದ ಕಲಾಕೃತಿಗಳ ದರ್ಶನ ಇಲ್ಲಿ ಆಗುತ್ತದೆ. ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವನ್ನು ಆರ್ಟ್​ ಗ್ಯಾಲರಿ ಮಾಡುತ್ತಿದೆ ಎಂದರು.

ಡಾ. ವಿ.ಬಿ. ನಿಟಾಲಿ, ಎಲ್​.ಸಿ. ಬೆಲ್ಲದ, ರಾಜು ಸೋನಾವನೆ, ವಸಂತ ಬಳ್ಳಾರಿ, ಮಂಜುನಾಥ ಕರಿಗಾರ, ಸುರೇಶ ಅರ್ಕಸಾಲಿ, ಸುಶೀಲ ಕಮ್ಮಾರ, ಗುರು ನಾವಳ್ಳಿ ಇತರರಿದ್ದರು.

ದೀಪಾ ವೆರ್ಣೇಕರ ಸ್ವಾಗತಿಸಿದರು. ಸವಿತಾ ಬೆಣಗಿ ನಿರೂಪಿಸಿದರು. ಮಹಿಳಾ ಕಲಾವಿದರು ದಾಂಡಿಯಾ ಕಾರ್ಯಕ್ರಮ ನಡೆಸಿಕೊಟ್ಟರು.