cross voters ಕೇಂದ್ರ ಸಚಿವ ಪ್ರಲ್ಹಾದ ಜೋಶಿ.
- ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ
- ಪಕ್ಷದ ಹೈಕಮಾಂಡ್ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ
ಹುಬ್ಬಳ್ಳಿ: cross voters ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಹಣದ ಆಸೆಗೆ ಬಲಿಯಾಗಿ ಈ ರೀತಿ ಮಾಡಿದ್ದಾರೆ. ಇದನ್ನೆಲ್ಲ ತಾವು ರಹಸ್ಯವಾಗಿ ಮಾಡಿದ್ದೇವೆ ಎಂದು ಅವರು ಅಂದುಕೊಂಡಿರಬಹುದು. ಆದರೆ, ಪಕ್ಷದ ಹೈಕಮಾಂಡ್ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸೂಕ್ತ ಕ್ರಮವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕಮಿಟಿ ಸಹ ರಚನೆಯಾಗಿದೆ. ಕೇಂದ್ರದ ನಾಯಕರು ಎಲ್ಲವನ್ನೂ ಗಮನಿಸಿದ್ದಾರೆ. ಪಕ್ಷದಿಂದ ಆಯ್ಕೆಯಾದವರಿಗೆ ನಮ್ಮವರಿಗೇ ಮತ ಹಾಕಬೇಕು ಎಂದು ಹೇಳುವ ಅವಶ್ಯಕತೆಯೂ ಇರುವುದಿಲ್ಲ. ಆದರೂ ಕೆಲವರು ಪ್ರಲೋಭನೆಗೆ ಒಳಗಾಗಿದ್ದಾರೆ ಎಂದರು.
ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಹಾಗೂ ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷಗಳ ಕುಟುಂಬ ರಾಜಕಾರಣ ಹಾಗೂ ಅಲ್ಲಿ ತಮಗೆ ಭವಿಷ್ಯವಿಲ್ಲ ಎಂದು ಭಾವಿಸಿ ಶಾಸಕರು, ಸಂಸದರು ಬಿಜೆಪಿಗೆ ಬರುತ್ತಿದ್ದಾರೆ. ಆದರೆ, ಯಾವುದೇ ಪಕ್ಷನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿಲ್ಲ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಭ್ರಷ್ಟಾಚಾರ, ಮಹಿಳೆಯರ ಮೇಲೆ ಅತ್ಯಾಚಾರ, ಸುಲಿಗೆ ಹಾಗೂ ಕುಟುಂಬ ರಾಜಕಾರಣದಿಂದ ಜನರು ಬೇಸತ್ತಿದ್ದರು. ಇಷ್ಟಾದರೂ ಮಮತಾ ಬ್ಯಾನರ್ಜಿ ಅವರು ಸಮರ್ಥನೆ ಮಾಡಿಕೊಳ್ಳುವ ರೀತಿ ಮಾತನಾಡಿದ್ದರಿಂದ ಆ ಪಕ್ಷದ ನಾಯಕರು ಬೇಸತ್ತಿದ್ದರು ಎಂದರು.
ನೂರು ವರ್ಷ ಪೂರೈಸಿದ ಆರ್ಎಸ್ಎಸ್ಗೆ ಯಾವುದೇ ನೋಂದಣಿ ಅವಶ್ಯಕತೆ ಇಲ್ಲ. ಸಚಿವ ಪ್ರಿಯಾಂಕ್ ಅವರು ಹಳೇ ಟೇಪ್ ರೆಕಾರ್ಡರ್ ರೀತಿ ಹೇಳಿದ್ದನ್ನೇ ಹೇಳುತ್ತಾರೆ. ಸದಾ ಸುದ್ದಿಯಲ್ಲಿ ಇರಬೇಕೆಂಬ ಹಪಾಹಪಿ ಅವರಿಗಿದೆ. ಅವರ ಪತ್ರಕ್ಕೆ ಮಹತ್ವ ಇಲ್ಲ. ಈಗಾಗಲೇ ಸಂಘದ ಹಿರಿಯರು ಉತ್ತರ ನೀಡಿದ್ದಾರೆ ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲ. ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಬಿಜಿ ಇದ್ದಾರೆ. ಹಾಗಾಗಿ ಅವರಿಗೆ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಇನ್ನಷ್ಟು ಸಮಯ ನೀಡುತ್ತಿದ್ದೇವೆ. ಹಾಗೆಂದು ಅವರ ಬಗ್ಗೆ ಸಾಫ್ಟ್ ಕಾರ್ನರ್ ಏನೂ ಇಲ್ಲ. ಅವರು ಮಂತ್ರಿಯಾಗಿದ್ದಾಗ ಬೆಂಗಳೂರು ಅಧೋಗತಿಗೆ ಹೋಗಿದೆ. ಮುಂದೆ ರಾಜ್ಯವೂ ಅದೇ ಸ್ಥಿತಿಗೆ ಹೋಗಲಿದೆ. ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಅವರ ಪಕ್ಷದವರೇ ದೂರುತ್ತಿದ್ದಾರೆ. ಆಡಳಿತ ಯಂತ್ರ ಸುಧಾರಿಸಿಕೊಳ್ಳದಿದ್ದರೆ ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಸಚಿವ ಜೋಶಿ ಹೇಳಿದರು.