crop loss ಧಾರವಾಡ ಕೃಷಿ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿದರು.
- ಕ್ಷೇತ್ರ ವೀಕ್ಷಣೆ ಮಾಡಿದ ಕೃಷಿ ಅಧಿಕಾರಿಗಳು
- ಪರಿಹಾರ ಕ್ರಮ ಕೈಗೊಳ್ಳಲು ರೈತರ ಆಗ್ರಹ
ಹುಬ್ಬಳ್ಳಿ:
ಸದ್ಯ ಬಿಸಿಲು, ಒಣ ಹವೆ ಮುಂದುವರಿದಿದ್ದರಿಂದ ಜಿಲ್ಲೆಯ ಬಹುತೇಕ ಬೆಳೆಗಳು ಒಣಗಿ ಹೋಗಿದ್ದು, ರೈತರ ಮುಖ ಬಾಡುವಂತೆ ಮಾಡಿದೆ. ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು, ಸೋಯಾಬೀನ್, ಶೇಂಗಾ, ಉದ್ದು, ಗೋವಿನಜೋಳ, ಭತ್ತ, ಹತ್ತಿ ಮುಂದಾದ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ.
ಉತ್ತಮ ಮುಂಗಾರು ಪೂರ್ವ ಮಳೆಯಿಂದ ಉತ್ಸಾಹದಲ್ಲಿದ್ದ ರೈತರು ಮೇ ಕೊನೇ ವಾರದಿಂದಲೇ ಬಿತ್ತನೆ ಆರಂಭಿಸಿದ್ದರು. 2.82 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಇಟ್ಟುಕೊಂಡಿತ್ತು. ಜೂನ್ ಆರಂಭದ ಹೊತ್ತಿಗೆ ಬಿತ್ತನೆ ಪ್ರಮಾಣ ಶೇ. 80ರಷ್ಟು ಮುಗಿದಿತ್ತು. ನಂತರದಲ್ಲಿ ಮಳೆ ಕೈಕೊಟ್ಟಿರುವುದರಿಂದ ಬಿತ್ತನೆ ಕೈಬಿಟ್ಟಿದ್ದಾರೆ.
ಆದರೆ, ಈಗಾಗಲೇ ಬಿತ್ತನೆ ಮಾಡಿದ ಹೆಸರು, ಸೋಯಾಬೀನ್, ಶೇಂಗಾ ಬೆಳೆಗಳು ಒಂದು ಅಡಿಯಷ್ಟು ಬೆಳೆದು ನಿಂತಿವೆ. ಸಮರ್ಪಕ ಮಳೆ ಇಲ್ಲದ ಕಾರಣಕ್ಕೆ ಒಣಗುತ್ತಿವೆ. ನೀರಾವರಿ ಸೌಲಭ್ಯ ಇರುವ ರೈತರು ಒಂದೆರಡು ಬಾರಿ ನೀರು ಉಣಿಸಿ ಬೆಳೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಆದರೆ, ಯಾವುದೇ ಜಲಮೂಲ ಇಲ್ಲದವರು, ಸಂರ್ಪೂಣ ಒಣಬೇಸಾಯ ನಂಬಿಕೊಂಡಿರುವ ರೈತರು ಒಣಗಿದ ಬೆಳೆಗಳನ್ನು ಕಂಡು ಮಮ್ಮಲ ಮರುಗುತ್ತಿದ್ದಾರೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಈ ಬಾರಿ ಎಲ್ ನಿನೋ ಪ್ರಭಾವ ಇರುತ್ತದೆ. ಮುಂಗಾರು ಮಾರುತಗಳು ಮಾರ್ಗ ಬದಲಿಸುವ ಸಾಧ್ಯತೆ ಬಗ್ಗೆ ತಿಳಿಸಲಾಗಿತ್ತು. ಆದರೆ, ಇಷ್ಟೊಂದು ಹಾನಿ ಮಾಡುತ್ತದೆ ಎಂದು ರೈತರು ಎನಿಸಿರಲಿಲ್ಲ. ದೇವರ ಮೇಲೆ ನಂಬಿಕೆ ಇಟ್ಟು ಮುಂಗಾರು ಬಿತ್ತನೆ ಮಾಡಿದ್ದಾರೆ. ಇದೇ ವಿಶ್ವಾಸದಲ್ಲಿ ಇದೀಗ ರೈತರು ದೇವರ ಮೊರೆ ಹೋಗುತ್ತಿದ್ದಾರೆ.
ಕೃಷಿ ಇಲಾಖೆ ಅಧಿಕಾರಿಗಳು ಸಹ ಕ್ಷೇತ್ರ ವೀಕ್ಷಣೆ ಮೂಲಕ ಬೆಳೆಗಳ ಸ್ಥಿತಿಗತಿ ಅವಲೋಕನ ಮಾಡುತ್ತಿದ್ದಾರೆ. ರೈತರೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ಸಲಹೆ ಸೂಚನೆಗಳನ್ನು ಅಧಿಕಾರಿಗಳು ನೀಡುತ್ತಿದ್ದಾರೆ.