ಹುಬ್ಬಳ್ಳಿ ರಾಜನಗರ (Cricket Camp)ಕೆಎಸ್​ಸಿಎ ಮೈದಾನದಲ್ಲಿ ಆರಂಭಗೊಂಡಿರುವ ಕ್ರಿಕೆಟ್ ಬೇಸಿಗೆ ಶಿಬಿರ. 
ಧಾರವಾಡ

ಕೆಎಸ್​ಸಿಎ ಅಕಾಡೆಮಿ (Cricket Camp) ಬೇಸಿಗೆ ಶಿಬಿರ ಆರಂಭ

ಸಂತೋಷ ವೈದ್ಯ
ಹುಬ್ಬಳ್ಳಿ: ಕರ್ನಾಟಕ ರಾಜ್ಯ (Cricket Camp) ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ) ಅಕಾಡೆಮಿ ವತಿಯಿಂದ ಇಲ್ಲಿಯ ರಾಜನಗರ ಮೈದಾನದಲ್ಲಿ ಒಂದು ತಿಂಗಳ ಕ್ರಿಕೆಟ್ ಬೇಸಿಗೆ ಶಿಬಿರ ಏ. 20ರಿಂದ ಆರಂಭಗೊಂಡಿದೆ ಎಂದು ಕೆಎಸ್​ಸಿಎ ಧಾರವಾಡ ವಲಯ ಸಂಚಾಲಕ ವೀರಣ್ಣ ಸವಡಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುರುಷರ 14, 16 ಹಾಗೂ 19 ವಯೋಮಿತಿಗಳ ವಿಭಾಗದಲ್ಲಿ ತಲಾ 25ರಂತೆ 75 ಆಟಗಾರರನ್ನು ಮತ್ತು ಮಹಿಳೆಯರ 15 ಹಾಗೂ 19 ವಯೋಮಿತಿಗಳ ವಿಭಾಗದಲ್ಲಿ ತಲಾ 25ರಂತೆ 50 ಆಟಗಾರ್ತಿಯರನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ, ಕಾರವಾರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಶಿಬಿರಾರ್ಥಿಗಳಿಗೆ ದೇಶಪಾಂಡೆನಗರ ಕರ್ನಾಟಕ ಜಿಮ್ಖಾನ್ ಕ್ಲಬ್ ಹಾಗೂ ಖಾಸಗಿ ಹೋಟೆಲ್​ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದರು.
15 ಮತ್ತು 19 ವಯೋಮಿತಿಗಳ ವಿಭಾಗದಲ್ಲಿ ಮಹಿಳೆಯರಿಗೆ ಹುಬ್ಬಳ್ಳಿಯಲ್ಲಿ ಇದೇ ಮೊದಲ ಬಾರಿಗೆ 1 ತಿಂಗಳ ಅವಧಿಯ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಎಲ್ಲ 5 ವಯೋಮಿತಿಗಳ ವಿಭಾಗಕ್ಕೆ ಪ್ರತ್ಯೇಕವಾಗಿ ಕೆಎಸ್​ಸಿಎ (ಬೆಂಗಳೂರು)ನಿಂದಲೇ ಬಿಸಿಸಿಐ ಲೆವಲ್ 1 ಕೋಚ್ ನಿಯೋಜಿಸಲಾಗಿದೆ. ಪಿಜಿಯೋ, ವಿಡಿಯೋ ಅನಾಲಿಸ್ಟ್, ಸ್ಟ್ರೆಂಥನಿಂಗ್ ಕೋಚ್​ಗಳು ಜತೆಗೆ ಇರಲಿದ್ದಾರೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಜನೆವರಿಯಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯಕ್ಕೆ ಸಿದ್ಧಪಡಿಸಲಾದ ಪಿಚ್ ಬಗ್ಗೆ ಬಿಸಿಸಿಐನಿಂದ ನಮಗಾಗಲಿ ಅಥವಾ ಕೆಎಸ್​ಸಿಎಗಾಗಲಿ ಯಾವುದೇ ದೂರುಗಳು ಬಂದಿಲ್ಲ. ಬಿಸಿಸಿಐ ತಟಸ್ಥ ಕ್ಯುರೇಟರ್ ಪಿಚ್ ಸಿದ್ಧಪಡಿಸಿದ್ದರು. ಜಮ್ಮು-ಕಾಶ್ಮೀರ ತಂಡದವರು ಬ್ಯಾಟಿಂಗ್​ನಲ್ಲಿ ಬೃಹತ್ ಮೊತ್ತ ಗಳಿಸಿದ್ದರೂ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ಸಹ ನೀಡಿದ್ದರು. ಹಾಗಾಗಿ ಪಿಚ್ ಬಗ್ಗೆ ದೂರುವ ಪ್ರಶ್ನೆ ಇಲ್ಲ. ಬೌಲರ್​ಗಳ ಸಾಮರ್ಥ್ಯ ನಿರ್ಣಾಯಕವಾಗಿರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಎಸ್​ಸಿಎ ಧಾರವಾಡ ವಲಯ ಅಧ್ಯಕ್ಷ ಅಲ್ತಾಫ್ ಕಿತ್ತೂರ, ಸದಸ್ಯ ವಸಂತ ಮುರುಡೇಶ್ವರ ಇದ್ದರು.