environmental ಹುಬ್ಬಳ್ಳಿಯ ಘಂಟಿಕೇರಿ ಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಹಾಗೂ ಮಾಲಿನ್ಯ ಮುಕ್ತ ಕರ್ನಾಟಕ ಸುವರ್ಣ ಮಹೋತ್ಸವವನ್ನು ಶಾಸಕ ಪ್ರಸಾದ ಅಬ್ಬಯ್ಯ ಉದ್ಘಾಟಿಸಿದರು. ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮ, ತಹಸೀಲ್ದಾರ ಮಹೇಶ ಗಸ್ತೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ ಹಾಗೂ ಇತರರು ಇದ್ದರು. 
ಧಾರವಾಡ

ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಿ environmental

ಆನಂದಕುಮಾರ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • ವಿಶ್ವದ ಕಲುಷಿತ ದೇಶಗಳಲ್ಲಿ ಭಾರತವು 5 ನೇ ಸ್ಥಾನ ಪಡೆದಿದೆ.
  • ಮಾಲಿನ್ಯ ನಿಯಂತ್ರಣದ ಕುರಿತು ಮಕ್ಕಳಿಗೆ ತಿಳಿ ಹೇಳಬೇಕು.
  • ಆಹಾರ ಸಹ ಕಲಬೆರಕೆಯಿಂದ ಕೂಡಿದೆ.
ಇಲ್ಲಿನ ಘಂಟಿಕೇರಿಯ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ.1 ಯಲ್ಲಿ ಬುಧವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾಲಿನ್ಯ ಮುಕ್ತ ಕರ್ನಾಟಕ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ 100 ಕಲುಷಿತ ನಗರಗಳಲ್ಲಿ ಭಾರತದ 90ಕ್ಕೂ ಹೆಚ್ಚು ನಗರಗಳಿವೆ. ವಿಶ್ವದ ಕಲುಷಿತ ದೇಶಗಳಲ್ಲಿ ಭಾರತವು 5 ನೇ ಸ್ಥಾನ ಪಡೆದಿದೆ. ನಾವು ಸೇವಿಸುವ ಆಹಾರ ಸಹ ಕಲಬೆರಕೆಯಿಂದ ಕೂಡಿದೆ. ಇಡೀ ಭೂಮಿಯನ್ನು ವಿಷಪೂರಿತವಾಗಿ ಮಾರ್ಪಾಡಿಸಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣದಲ್ಲಿ ಮಹತ್ತರ ಬದಲಾವಣೆೆ ತರಲು ಶಿಕ್ಷಕರು ಮುಂದಾಗಬೇಕಿದೆ. ಹಸಿರು ಶಾಲಾ ಆವರಣ ನಿಮಾಣಕ್ಕೆ ಆದ್ಯತೆ ನೀಡಬೇಕು. ಮಾದರಿ ಶಿಕ್ಷಕರಾಗುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮ ಮಾತನಾಡಿ, ಮಾಲಿನ್ಯ ನಿಯಂತ್ರಣದ ಕುರಿತು ಮಕ್ಕಳಿಗೆ ತಿಳಿ ಹೇಳಬೇಕು. ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಕರು ಹೆಚ್ಚಿನ ಸಮಯ ನೀಡಬೇಕು ಎಂದು ತಿಳಿಸಿದರು. ಹುಬ್ಬಳ್ಳಿ ಶಹರ ತಹಶೀಲ್ದಾರ ಮಹೇಶ ಭಗವಂತ ಗಸ್ತೆ ಮಾತನಾಡಿ, ನಮ್ಮ ಪರಿಸರವು ಕೇವಲ ಮರಗಳು ಮತ್ತು ನದಿಗಳ ಸಂಗ್ರಹವಲ್ಲ, ಅದು ನಮ್ಮ ಅಸ್ತಿತ್ವದ ಅಡಿಪಾಯವಾಗಿದೆ. ಪರಿಸರವನ್ನು ಸಂರಕ್ಷಿಸುವುದು ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾಗಿ ಬಳಸುವುದು ಮತ್ತು ಮುಂದಿನ ಪೀಳಿಗೆಗೆ ಉತ್ತಮವಾದ ಭೂಮಿಯನ್ನು ಬಿಟ್ಟು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಹುಬ್ಬಳ್ಳಿ ಶಹರ ಕ್ಷ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪರಿಸರ ಜಾಗೃತಿಗೆ ಸಂಬಂಧಿಸಿದ ಚಿತ್ರಕಲೆ, ಪ್ರಬಂಧ, ರಸಪ್ರಶ್ನೆ, ಕವನ ವಚನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪರಿಸರ ಜಾಗೃತಿ ನೃತ್ಯವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ನೃತ್ಯ ಮಾಡಿದ ವಿದ್ಯಾರ್ಥಿಗಳಿಗೆ ಶಾಸಕರಾದ ಪ್ರಸಾದ ಅಬ್ಬಯ್ಯ ಅವರು ಪ್ರೋತ್ಸಾಹಧನ ನೀಡಿ ಗೌರವಿಸಿದರು.
ಪಾಲಿಕೆ ಸದಸ್ಯೆ ಮಂಜುಳಾ ಜಾಧವ, ಪ್ರಕಾಶ ಬುರಬುರೆ, ಶಿವಾನಂದ ಗುಂಡರ, ಮಂಜುನಾಥ ಜಂಗಳಿ, ಎಸ್​ಡಿಎಂಸಿ ಸದಸ್ಯರಾದ ಶ್ವೇತಾ ಸಿದ್ಲಿಂಗ, ಚಂಬಾ ಜಬಲಾಪುರ, ಕಂದಾಯ ನಿರೀಕ್ಷಕ ರವಿ ಬೆನ್ನೂರ ಹಾಗೂ ಇತರರಿದ್ದರು.