ಸತೀಶ ಉಪ್ಪಾಲಪಟಿ ಹಾಗೂ ಶಿಲ್ಪಾ ಬಾಂದಾ 
ಧಾರವಾಡ

ಹೈದರಾಬಾದ್‌ನಲ್ಲಿ 23 ಕೋಟಿ ರೂ. ವಂಚಿಸಿದ್ದ ದಂಪತಿ ಧಾರವಾಡದಲ್ಲಿ ಸೆರೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ತೆಲಂಗಾಣದ ಹೈದರಾಬಾದ್‌ನಲ್ಲಿ 23 ಕೋಟಿ ರೂಪಾಯಿ ವಂಚನೆ ಮಾಡಿ ತಲೆಮರೆಸಿಕೊಂಡಿದ್ದ ದಂಪತಿಯನ್ನು ಧಾರವಾಡ ಜಿಲ್ಲಾ ಪೊಲೀಸರು ಹುಬ್ಬಳ್ಳಿ- ಧಾರವಾಡ ಬೈಪಾಸ್‌ನಲ್ಲಿ ಶುಕ್ರವಾರ ಬಂಧಿಸಿ ಹೈದರಾಬಾದ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸತೀಶ ಉಪ್ಪಾಲಪಟಿ ಹಾಗೂ ಶಿಲ್ಪಾ ಬಾಂದಾ ಬಂಧಿತ ದಂಪತಿ. ಇವರು ತೆಲಂಗಾಣದ ವಿವಿಧೆಡೆ ಹಲವು ಪ್ರಕರಣಗಳಲ್ಲಿ ಸುಮಾರು 23 ಕೋಟಿ ರೂಪಾಯಿ ಹಣಕಾಸು ವಂಚನೆ ಮಾಡಿದ್ದರು. ದಂಪತಿಯ ವಿರುದ್ಧ ಡಾ. ಪಿ. ವಿನಯಕುಮಾರ್ ಸೇರಿ ಇತರರು ತೆಲಂಗಾಣ ಸೆಂಟ್ರಲ್ ಕ್ರೈ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದರು. ಆದರೆ, ಈ ದಂಪತಿ ಪೊಲೀಸರ ಕೈಗೆ ಸಿಗದೆ ಬೇರೆ ಬೇರೆ ರಾಜ್ಯಗಳಲ್ಲಿ ಸುತ್ತಾಡುತ್ತಿದ್ದರು. ಈ ಇಬ್ಬರು ಧಾರವಾಡ ಬೈಪಾಸ್ ಮೂಲಕ ಹೋಗುತ್ತಿದ್ದಾರೆ ಎಂಬ ಮಾಹಿತಿ ಹೈದರಾಬಾದ್ ಪೊಲೀಸರಿಂದ ಧಾರವಾಡ ಜಿಲ್ಲಾ ಪೊಲೀಸರಿಗೆ ಬಂದಿತ್ತು.
ಎಸ್‌ಪಿ ಗುಂಜನ್ ಆರ್ಯ ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಆದೇಶಿಸಿದ್ದರು. ಪೊಲೀಸ್ ತಂಡಗಳು ಹು-ಧಾ ಬೈಪಾಸ್ ಸೇರಿ 3 ಕಡೆಗಳಲ್ಲಿ ಚೆಕ್ ಪೋಸ್ಟ್ ಹಾಕಿ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಿದ್ದರು. ವೈಜ್ಞಾನಿಕ ಸಾಕ್ಷ್ಯಾಧಾರಗಳ ಖಚಿತ ಮಾಹಿತಿ ಮೇರೆಗೆ ದಂಪತಿಯನ್ನು ಗುರುವಾರ ಬಂಽಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ತೆಲಂಗಾಣ ಸೆಂಟ್ರಲ್ ಕ್ರೈ ಸ್ಟೇಷನ್ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ.
ಪೊಲೀಸರಿಂದ ತಪ್ಪಿಸಿಕೊಂಡಿದ್ದ...
ಉದ್ಯಮಿಗಳಿದ ಸುಮಾರು 23 ಕೋಟಿ ರೂಪಾಯಿ ಹೂಡಿಕೆ ಮಾಡಿ ತಲೆಮರೆಸಿಕೊಂಡಿದ್ದ ಸತೀಶ ಉಪ್ಪಾಲಪಟಿಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿತ್ತು. ಅ. 29ರಂದು ಹೈದರಾಬಾದಕ್ಕೆ ಕರೆದೊಯ್ಯುತ್ತಿದ್ದಾಗ ಊಟಕ್ಕೆ ನಿಂತಿದ್ದ ವೇಳೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ನಂತರ ಪೊಲೀಸರ ಕಣ್ತಪ್ಪಿಸಿ ಹಲವು ರಾಜ್ಯಗಳಲ್ಲಿ ಸಂಚರಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
"

ಸುಮಾರು 23 ಕೋಟಿ ರೂಪಾಯಿ ಹಣಕಾಸು ವಂಚನೆ ಮಾಡಿರುವ ದಂಪತಿ ನಮ್ಮ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಕುರಿತು ನ. 20ರಂದು ಸಂಜೆ 5ಕ್ಕೆ ತೆಲಂಗಾಣದಿ೦ದ ಮಾಹಿತಿ ಬಂದಿತ್ತು. ಆರೋಪಿಗಳ ಚಲನವಲದ ಕುರಿತು ವೈಜ್ಞಾನಿಕ ಸಾಕ್ಷ್ಯಗಳನ್ನು ಕಳುಹಿಸಿದ್ದರು. ಅದರ ಅನ್ವಯ 3 ಕಡೆಗಳಲ್ಲಿ ಚೆಕ್‌ಪೋಸ್ಟ್ ಹಾಕಿ ತಪಾಸಣೆ ಮಾಡಲಾಗಿತ್ತು. ಇವರಿಬ್ಬರೂ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಆರೋಪಿಗಳಾಗಿದ್ದು, ಜಾಗ ಬದಲಾಯಿಸುತ್ತ ಪೊಲೀಸರ ಕೈಗೆ ಸಿಗದೆ ಸಂಚರಿಸುತ್ತಿದ್ದರು. ರಾಮದುರ್ಗ ಕಡೆ ಹೊರಟಿದ್ದ ಇಬ್ಬರನ್ನೂ ವಶಕ್ಕೆ ಪಡೆದು ತೆಲಂಗಾಣ ಸೆಂಟ್ರಲ್ ಕ್ರೈ೦ ಸ್ಟೇಷನ್ ಪೊಲೀಸರ ಸುಪರ್ದಿಗೆ ನೀಡಲಾಗಿದೆ.

— ಗುಂಜನ್ ಆರ್ಯ, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ