ಹುಬ್ಬಳ್ಳಿ : ವಿಧಾನ ಪರಿಷತ್ನ 4 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿಗಳು ಜಯ ಸಾಧಿಸಿದ್ದು, ಈ ಜಯ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ಆಡಳಿತ ಪಕ್ಷಕ್ಕೆ ಮತದಾರರು ಬಹುಪರಾಕ್ ಎನ್ನುತ್ತಿದ್ದರು. ಆದರೆ, ಎರಡು ಶಿಕ್ಷಕರ ಮತ್ತು ಎರಡು ಪದವೀಧರರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ ಎಂದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಹಾಗೂ 2028ರ ವಿಧಾನಸಭೆ ಚುನಾವಣೆಗೆ ಈಗಿನ ಫಲಿತಾಂಶ ದಿಕ್ಸೂಚಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಎಸ್ಐಆರ್ ಹಾಗೂ ಮತದಾನಕ್ಕೆ ಇವಿಎಂ ಬಳಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಹಾಗೂ ಆ ಪಕ್ಷದವರು ವಿರೋಧಿಸುತ್ತಲೇ ಬಂದಿದ್ದಾರೆ. ಆದರೆ, ವಿಧಾನ ಪರಿಷತ್ನ ಮತದಾನ ಬ್ಯಾಲೆಟ್ ಪೇಪರ್ ಮೂಲಕ ನಡೆದರೂ ಒಬ್ಬ ಕಾಂಗ್ರೆಸ್ ಅಭ್ಯರ್ಥಿಯೂ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು.
ಹಲವಾರು ಹಗರಣಗಳು, ಸ್ಟಿಂಗ್ ಆಪರೇಶನ್, ಗ್ಯಾರಂಟಿ ಯೋಜನೆಗಳು ಸಂಪೂರ್ಣ ಅನುಷ್ಠಾನಗೊಳ್ಳದೇ ಇರುವುದು, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆಯ ವೈಫಲ್ಯಗಳಿಂದ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ. ಅದೆಲ್ಲದರ ಪರಿಣಾಮವೇ ಈ ಫಲಿತಾಂಶ ಎಂದು ತಿಳಿಸಿದರು.
ಎಲ್ಲ ನಾಲ್ಕೂ ಕ್ಷೇತ್ರಗಳಿಗೆ ಕಾಂಗ್ರೆಸ್ 10 ತಿಂಗಳು ಮೊದಲೇ ಅಭ್ಯರ್ಥಿಗಳ ಘೋಷಣೆ ಮಾಡಿತ್ತು. ಬಿಜೆಪಿ ಚುನಾವಣೆಯ 3 ತಿಂಗಳ ಮೊದಲಷ್ಟೇ ಅಭ್ಯರ್ಥಿಗಳನ್ನು ಘೋಷಿಸಿತ್ತು. ಆದರೂ, ಪಕ್ಷದ ಕಾರ್ಯಕರ್ತರೆಲ್ಲ ಒಗ್ಗಟ್ಟಾಗಿ ಅಭ್ಯರ್ಥಿಗಳನ್ನು ಗೆಲ್ಲಿಸಿದರು. ಈ ಗೆಲುವು ಪಕ್ಷದ ಕಾರ್ಯಕರ್ತರದ್ದು ಎಂದು ಹೇಳಿದರು.
ಪಶ್ಚಿಮ ಪದವೀಧರರ ಕ್ಷೇತ್ರ ವ್ಯಾಪ್ತಿಯ 4 ಜಿಲ್ಲೆಗಳಲ್ಲಿರುವ 23 ವಿಧಾನಸಭೆ ಕ್ಷೇತ್ರಗಳಲ್ಲಿ 17 ಜನ ಕಾಂಗ್ರೆಸ್ ಶಾಸಕರಿದ್ದರೆ, 6 ಜನ ಮಾತ್ರ ಬಿಜೆಪಿ ಶಾಸಕರು ಇದ್ದಾರೆ. ಆದರೂ, ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಗೆಲುವು ಸಾಧಿಸಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಮತದಾರರು, ಅಭಿವೃದ್ಧಿ ಬಗ್ಗೆ ಜಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ ಎಂದು ವ್ಯಂಗ್ಯವಾಡಿದರು.
ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಮಾತನಾಡಿ, ಭ್ರಷ್ಟಾಚಾರವನ್ನೇ ಮುಖ್ಯ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದರು.
ವಿದೇಶಿ ಶಕ್ತಿಗಳಿಂದ ಹಣ ಪಡೆದು, ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿರುವ ಕಾಂಗ್ರೆಸ್ಗೆ ಈ ಫಲಿತಾಂಶದ ಮೂಲಕ ಎಚ್ಚರಿಕೆ ನೀಡಿದ್ದಾರೆ. ಎಡಪಂಥೀಯ ವಿಚಾರಧಾರೆಗೆ ಇದರಿಂದ ದೊಡ್ಡ ಹೊಡೆತ ಬಿದ್ದಂತಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆಲುವು ಕಂಡಿದ್ದಾರೆ. ಅಲ್ಲಿನ ಶಿಕ್ಷಕರು ಖರ್ಗೆ ಕುಟುಂಬ ಆಡಳಿತವನ್ನು ತಿರಸ್ಕರಿಸಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಲಿಂಗರಾಜ ಪಾಟೀಲ, ವಿಭಾಗ ಪ್ರಭಾರಿ ಜಯತೀರ್ಥ ಕಟ್ಟಿ, ಮೇಯರ್ ದುರ್ಗಮ್ಮ ಬೆಜವಾಡ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ವಕ್ತಾರ ರಾಜು ಕೋರ್ಯಾಣಮಠ ಸುದ್ದಿಗೋಷ್ಠಿಯಲ್ಲಿ ಇದ್ದರು.