ಹಾನಿಯದ ಹತ್ತಿ 
ಧಾರವಾಡ

ಹತ್ತಿ ಬಿತ್ತನೆ ಪ್ರಮಾಣ ಇಳಿಮುಖ

ಮಂಜುನಾಥ ಎಸ್​. ಅಂಗಡಿ ಧಾರವಾಡ
ಜಿಲ್ಲೆಯಲ್ಲಿ ಹತ್ತಿ ಬೆಳೆಯ ಬಿತ್ತನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ವರ್ಷಕ್ಕೆ ಒಂದೇ ಬೆಳೆ, ಹತ್ತಿ ಒಕ್ಕಣೆಗೆ ಬಾರದ ಕೃಷಿ ಕಾರ್ಮಿಕರು, ಹೆಚ್ಚುತ್ತಿರುವ ಕೀಟಬಾಧೆ, ಇಳುವರಿ ಕುಂಠಿತ, ಅಕಾಲಿಕ ಮಳೆ ಸೇರಿ ಹಲವು ಕಾರಣಗಳಿಂದ ಹತ್ತಿ ಬಿತ್ತನೆ ಪ್ರಮಾಣ ಇಳಿಕೆಯಾಗುತ್ತ ಸಾಗುತ್ತಿದೆ.
ವಾಣಿಜ್ಯ ಬೆಳೆಯಾದ ಹತ್ತಿ ಬಿಳಿ ಬಂಗಾರ ಎಂದು ಕರೆಯಲ್ಪಡುತ್ತದೆ. ಜಿಲ್ಲೆಯ ಕುಂದಗೋಳ, ನವಲಗುಂದ, ಅಣ್ಣಿಗೇರಿ ತಾಲೂಕುಗಳಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯಲಾಗುತ್ತದೆ. ವಾರ್ಷಿಕ ಬೆಳೆ ಮತ್ತು ಸಾಧಾರಣ ಮಳೆಯಾದರೂ ಹತ್ತಿ ಬೆಳೆದು ರೈತರು ಉತ್ತಮ ಆದಾಯ ಗಳಿಸುತ್ತಿದ್ದರು. ಆದರೆ, ಕೆಲ ವರ್ಷಗಳಿಂದ ಅಕಾಲಿಕ ಮಳೆಯ ಅವಾಂತರದ ಜತೆಗೆ ಕೀಟಬಾಧೆಯೂ ರೈತರನ್ನು ಕಂಗೆಡಿಸಿದೆ. ಜತೆಗೆ ಬೇಸಿಗೆಯಲ್ಲಿ ಹತ್ತಿ ಒಕ್ಕಣೆ ನಡೆಯುತ್ತದೆ. ಹತ್ತಿ ಬಿಡಿಸಲು ಕಾರ್ಮಿಕರು ಬಾರದೆ ರೈತರು ಪರದಾಡಬೇಕಾಗಿದೆ. ಈ ಎಲ್ಲ ಕಾರಣಗಳಿಂದ ಹತ್ತಿ ಬಿತ್ತನೆ ಪ್ರಮಾಣ ಕಡಿಮೆಯಾಗುತ್ತ ಸಾಗಿದೆ.
ಪ್ರಸಕ್ತ ವರ್ಷ 49,292 ಹೆಕ್ಟೇರ್​ ಬಿತ್ತನೆ ಗುರಿ ಇತ್ತು. ಕೃಷಿ ಇಲಾಖೆಯ ಅಂಕಿಅಂಶದಂತೆ ಜೂ. 16ರವರೆಗೆ 25,373 ಹೆಕ್ಟೇರ್​ ಪ್ರದೇಶ ಬಿತ್ತನೆಯಾಗಿದೆ. ಈ ಬಾರಿಯ ಮುಂಗಾರು ಹೊಯ್ದಾಟ ನಡೆಸಿದ್ದು, ಈವರೆಗೂ ಸಮರ್ಪಕ ಮಳೆಯಾಗಿಲ್ಲ. ಹೀಗಾಗಿ ಹಿಂಗಾರು ಮಳೆಯಾದರೂ ಉತ್ತಮವಾದೀತು ಎಂಬ ನಿರೀೆಯಲ್ಲಿ ರೈತರು ವಾರ್ಷಿಕ 2 ಬೆಳೆಗಳ ಮೊರೆ ಹೋಗುತ್ತಿದ್ದಾರೆ.
ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗುತ್ತದೆ. ಆದರೆ, ಹತ್ತಿ ಬೀಜಕ್ಕೆ ಸಹಾಯಧನ ಸಿಗುವುದಿಲ್ಲ. ಹೀಗಾಗಿ ಮೂಲ ದರಕ್ಕೆ ಹತ್ತಿ ಬೀಜ ಖರೀದಿಸಬೇಕು. ಮತ್ತೊಂದೆಡೆ ಹೂವು ಮತ್ತು ಕಾಯಿ ತುಂಬಿದ ಹತ್ತಿ ಬೆಳೆಗೆ ಕೀಟಬಾಧೆ ಇನ್ನಿಲ್ಲದಂತೆ ಕಾಡುತ್ತಿದೆ. ಕೀಟ ನಿಯಂತ್ರಣಕ್ಕೆ 4- 5 ಬಾರಿ ಕೀಟನಾಶಕ ಸಿಂಪಡಣೆ ಮಾಡಬೇಕಾದ ಅನಿವಾರ್ಯತೆ ಇದೆ. 2 ವರ್ಷಗಳ ಹಿಂದೆ ಜಿಲ್ಲೆಯ ಕೆಲವೆಡೆ ಗುಲಾಬಿ ಕಾಯಿಕೊರಕ ಬಾಧೆ ಕಾಣಿಸಿಕೊಂಡಿದ್ದರಿಂದ ರೈತರು ಹತ್ತಿ ಬೆಳೆ ಕಿತ್ತು ಹಾಕಿದ್ದ ನಿದರ್ಶನವೂ ಇದೆ.
2020- 21ರಲ್ಲಿ 86,592 ಹೆಕ್ಟೇರ್​ ಇದ್ದ ಹತ್ತಿ ಬಿತ್ತನೆ ಪ್ರದೇಶ ಪ್ರಸಕ್ತ ಜೂ. 16ರವರೆಗೆ 25,373 ಹೆಕ್ಟೇರ್​ ಬಿತ್ತನೆಯಾಗಿದೆ. ಹತ್ತಿ ಬಿತ್ತನೆ ಕ್ಷೇತ್ರ ಕಡಿಮೆಯದರೂ ದರ ಹೆಚ್ಚುತ್ತಲೇ ಇದೆ. ಆದಾಗ್ಯೂ ರೈತರು ಮುಸುಕಿನಜೋಳ, ಸೋಯಾಬಿನ್​, ಹೆಸರು ಬೆಳೆ ಬೆಳೆದು ಹಿಂಗಾರಿಗೆ ಮತ್ತೊಂದು ಬೆಳೆಯ ಮೊರೆ ಹೋಗುತ್ತಿದ್ದಾರೆ.