ಧಾರವಾಡ: ಹದಿನೆಂಟು ವರ್ಷ ವಯಸ್ಸು ಪೂರ್ಣಗೊಳಿಸಿದ ಯುವ ಮತದಾರರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಎಲ್ಲರೂ ಸಹಕರಿಸಬೇಕೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಕೆಸಿಡಿ ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸ್ವೀಪ್ ಚಟುವಟಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯಕ್ರಮ ಯಶಸ್ವಿಯಾಗಿ ಸಾಗುತ್ತಿದ್ದು, ರಾಜ್ಯದಲ್ಲಿ ಸುಮಾರು ಐದೂವರೆ ಕೋಟಿ ಮತದಾರರ ಪೈಕಿ ಮೂರುವರೆ ಕೋಟಿ ಮತದಾರರ ಪರಿಶೀಲನಾ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ರಾಜ್ಯದ 59 ಸಾವಿರ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಜತೆಗೆ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡುತ್ತಿರುವ ಜಿಲ್ಲಾಧಿಕಾರಿಗಳು, ಚುನಾವಣಾ ಅಽಕಾರಿಗಳು ಹಾಗೂ ಜಿಪಂ ಸಿಇಒ ಕಾರ್ಯ ಶ್ಲಾಘನೀಯ ಎಂದರು.
ಸುಮಾರು 500 ವಿದ್ಯಾರ್ಥಿಗಳಿಂದ ಮಾನವ ಸರಪಳಿ ನಿರ್ಮಿಸುವ ಮೂಲಕ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಮೂಡಿಸಲಾಯಿತು.
ಜಿಲ್ಲಾಽಕಾರಿ ಸ್ನೇಹಲ್ ಆರ್., ಜಿಪಂ ಸಿಇಒ ಭುವನೇಶ ಪಾಟೀಲ, ಪ್ರೊಬೆಷನರಿ ಐಎಎಸ್ ಅಽಕಾರಿ ಅನುಪ್ರೀಯಾ ಸಾಕ್ಯಾ, ಪಾಲಿಕೆ ಆಯುಕ್ತ ಡಾ. ರುದ್ರೇಶ್ ಘಾಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಜಿಪಂ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ ಇತರರಿದ್ದರು. ಜಿಲ್ಲಾ ಯೋಜನಾ ಸಮನ್ವಯಾಽಕಾರಿ ಎಸ್.ಎಂ. ಹೂಡೆದಮನಿ ನಿರೂಪಿಸಿ, ವಂದಿಸಿದರು.