contractors demand ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಪಂಪಣ್ಣ ಅಂಬಿಗೇರ ಮಾತನಾಡಿದರು.
- ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಆಗ್ರಹ
- ಕಾರ್ಮಿಕ ಸಾವು ಪ್ರಕರಣ
ಹುಬ್ಬಳ್ಳಿ:
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 2ರಂದು ಡೆನೇಜ್ ಪೈಪ್ ಅಳವಡಿಸುವ ಕಾಮಗಾರಿಯಲ್ಲಿ ದಿನಗೂಲಿ ನೌಕರ ಮಲ್ಲಪ್ಪ ಜೋಗಿನ ಎಂಬಾತ ಆಕಸ್ಮಿಕವಾಗಿ ಮೃತಪಟ್ಟಿದ್ದಾನೆ. ಕಾರ್ಮಿಕನ ಸಾವಿನ ಬಗ್ಗೆ ಸಂಘ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಆದರೆ, ಪ್ರಕರಣದಲ್ಲಿ ಗುತ್ತಿಗೆದಾರರ ಮೇಲೆ ನೇರ ಆರೋಪ ಹೊರಿಸಲಾಗಿದೆ. ಇದು ಸರಿಯಲ್ಲ ಎಂದರು.
ವಾಸ್ತವದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಒತ್ತಡದಿಂದ ಸರಿಯಾದ ಅಂದಾಜು ಪತ್ರಿಕೆ ಇಲ್ಲದೇ ತ್ವರಿತವಾಗಿ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸುತ್ತಾರೆ. ಇದಕ್ಕೆ ಅನೇಕ ಅಡೆತಡೆಗಳು ಎದುರಾಗುತ್ತವೆ. ಅವುಗಳನ್ನೆಲ್ಲ ಮೀರಿ ಕಾರ್ಮಿಕರೊಂದಿಗೆ ಕಾಮಗಾರಿಯ ಸ್ಥಳದಲ್ಲಿ ಮಳೆ, ಬಿಸಿಲು ಎನ್ನದೇ ಸಾರ್ವಜನಿಕ ಹಿತದೃಷ್ಟಿಯಿಂದ ಕಾಮಗಾರಿ ಪೂರ್ಣಗೊಳಿಸಲು ಮುಂದಾಗುತ್ತೇವೆ.
ಆದರೆ, ಇಂತಹ ಘಟನೆ ನಡೆದಾಗ ಕೇವಲ ಗುತ್ತಿಗೆದಾರರನ್ನು ಹೊಣೆ ಮಾಡಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಅವೈಜ್ಞಾನಿಕ ಕಾಮಗಾರಿಗೆ ಒತ್ತಾಯಿಸುವ ಮಹಾನಗರ ಪಾಲಿಕೆ ಕೂಡ ಇದರಲ್ಲಿ ತಪ್ಪಿತಸ್ಥ. ಹಾಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಕಾರ್ಮಿಕನ ಕುಟುಂಬಕ್ಕೆ ಸರ್ಕಾರದಿಂದ ಬರಬೇಕಾದ ಪರಿಹಾರ ಕೊಡಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ಗುತ್ತಿಗೆದಾರರು ಉದ್ದೇಶಪೂರ್ವಕವಾಗಿ ಕಾರ್ಮಿಕರಿಗೆ ತೊಂದರೆ ಕೊಡಲು ಹೋಗುವುದಿಲ್ಲ. ಅಚಾತುರ್ಯದಿಂದ ಘಟನೆ ನಡೆದಿದೆ. ವೈಜ್ಞಾನಿಕವಾಗಿ ಕೆಲಸ ಮಾಡಲು ಪಾಲಿಕೆ ಅವಕಾಶ ನೀಡಬೇಕು. ಪಾಲಿಕೆ ಇಂಜಿನಿಯರ್ಗಳು, ಹಿರಿಯ ಅಧಿಕಾರಿಗಳು ಆಗಾಗ ನಮ್ಮ ಕಷ್ಟಗಳನ್ನು ಕೇಳಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕನ ಕುಟುಂಬಕ್ಕೆ ಸಂದಿಂದ ಸಹಾಯ ಮಾಡಲು ಸಿದ್ಧರಿದ್ದೇವೆ. ಸರ್ಕಾರಿ ಅಧಿಕಾರಿಗಳು ಗುತ್ತಿಗೆದಾರರ ಸಮಸ್ಯೆ ಆಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾಮಗಾರಿ ಸ್ಥಗಿತಗೊಳಿಸಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.