ಕವಿವ ಸಂಘದಲ್ಲಿ ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟಗಾರರ ಸಭೆ. 
ಧಾರವಾಡ

ಧಾರವಾಡ ಪ್ರತ್ಯೇಕ ಪಾಲಿಕೆಗಾಗಿ ಮೇ 15ರಿಂದ ನಿರಂತರ ಧರಣಿ

ಧಾರವಾಡ: ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಒತ್ತಾಯಿಸಿ ಪಾಲಿಕೆ ಕಚೇರಿ ಎದುರು ನಿರಂತರ ಧರಣಿ ಹಮ್ಮಿಕೊಂಡು, ರಾಜ್ಯಪಾಲರ ಬಳಿ ನಿಯೋಗ ಹೋಗುವುದಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸೋಮವಾರ ಸೇರಿದ್ದ `ಸ್ವಾಭಿಮಾನಿ ಪಕ್ಷಾತೀತ ಹೋರಾಟಗಾರರ' ಸಭೆಯಲ್ಲಿ ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಯಿತು.
ಪ್ರತ್ಯೇಕ ಪಾಲಿಕೆಗೆ ಒತ್ತಾಯಿಸಿ ಮೇ 15ರಿಂದ 30ರವರೆಗೆ ಧಾರವಾಡ ಪಾಲಿಕೆ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ನಡೆಸಲು ನಿರ್ಣಯಿಸಿದರು. ಪ್ರತಿದಿನ ಧಾರವಾಡದ ಪ್ರತಿಯೊಂದು ವಾರ್ಡ್ನ ಪ್ರಮುಖರು ಆಯಾ ದಿನದ ಧರಣಿಯ ಉಸ್ತುವಾರಿ ವಹಿಸಬೇಕೆನ್ನುವುದನ್ನು ತೀರ್ಮಾನಿಸಿದರು.
ಮೇ 12ರಂದು ಬೆಳಗ್ಗೆ 10 ಗಂಟೆಗೆ ಹೋರಾಟಗಾರರ ನಿಯೋಗವು ಸರ್ಕ್ಯೂಟ್ ಹೌಸ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಅಗತ್ಯತೆ ಬಗ್ಗೆ ತಿಳಿಸಿ, ಸರ್ಕಾರದ ಮಟ್ಟದಲ್ಲಿ ಈ ಪ್ರಸ್ತಾವನೆಗೆ ವೇಗ ನೀಡುವಂತೆ ಒತ್ತಾಯಿಸಲು ಸಮಯ ನಿಗದಿಪಡಿಸಿದರು. ಪ್ರತ್ಯೇಕ ಪಾಲಿಕೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಜನಪ್ರತಿನಿಽಗಳ ಮನೆ ಎದುರು ಧರಣಿಗೂ ನಿರ್ಧರಿಸಲಾಯಿತು.
ಇದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ನೇಗಿನಾಳ, ಪ್ರತ್ಯೇಕ ಮಹಾನಗರ ಪಾಲಿಕೆ ಮಾಡುವಲ್ಲಿ ಸರ್ಕಾರ ತಡ ಮಾಡಿದೆ. ರಾಜ್ಯಪಾಲರ ಮೇಲೆ ಸರ್ಕಾರನೂ ಒತ್ತಡ ತರಬೇಕು. ಬಿಜೆಪಿಯವರು ಬೃಹತ್ ಮಹಾನಗರ ಪಾಲಿಕೆ ಮಾಡಲು ಹೊರಟಿರುವುದು ಸರಿಯಲ್ಲ ಎಂದರು. ಪಕ್ಷಕ್ಕೆ ಅಂಟಿಕೊAಡವರನ್ನು ಹೋರಾಟದ ಲೀಡರ್ ಮಾಡಬೇಡಿ. ಬಿ.ಡಿ. ಹಿರೇಗೌಡರ ಅವರನ್ನು ಲೀಡರ್ ಮಾಡಿದರೆ ಒಳಿತು ಎಂದರು.
ಗುರುರಾಜ ಹುಣಸಿಮರದ ಮಾತನಾಡಿ, ಇಲ್ಲಿನ ಶಾಸಕ, ಸಚಿವರು, ಸಂಸದರು ವಿರೋಧದಿಂದಾಗಿ ಪ್ರತ್ಯೇಕ ಪಾಲಿಕೆ ಆಗುವುದು ವಿಳಂಬವಾಗಿದೆ ಎಂಬ ಆರೋಪಗಳಿವೆ. ಹೀಗಾಗಿ ಅಂತಹ ಎಲ್ಲ ಪ್ರತಿನಿಽಗಳ ಮನೆಗೆ ಹೋಗಿ ಕೇಳೋಣ. ಪ್ರತ್ಯೇಕ ಪಾಲಿಕೆಗೆ ಒಪ್ಪಿಗೆ ಇದೆ ಎಂದರೆ, ಅದನ್ನು ಸಾರ್ವಜನಿಕರಿಗೆ ಅವರು ಸ್ಪಷ್ಟಪಡಿಸಲಿ. ಬಳಿಕ ರಾಜ್ಯಪಾಲರ ಬಳಿ ಹೋಗೋಣ. ಇದು ಧಾರವಾಡದ ಅಸ್ತಿತ್ವದ ಪ್ರಶ್ನೆ ಎಂದರು.
ವೆಂಕಟೇಶ ಮಾಚಕನೂರ ಮಾತನಾಡಿ, ರಾಜ್ಯಪಾಲರ ಬಳಿ ಕಡಲು ಇರಲು ಸಚಿವ ಜೋಶಿ ಅವರ ಕೈವಾಡ ಇದೆ. ಇದನ್ನು ನೇರವಾಗಿ ರಾಜ್ಯಪಾಲರೇ ಹೇಳಿದ್ದಾರೆಂದು ದೂರಿದರು. ಇದರಲ್ಲಿ ಸರ್ಕಾರದ ನಿರ್ಲಕ್ಷ÷್ಯವೂ ಇದೆ. ಕಳಿಸಿ ಸುಮ್ಮನೆ ಕುಳಿತಿದ್ದಾರೆ ಎಂದರು.
ಮನೋಜ ಪಾಟೀಲ ಮಾತನಾಡಿ, ರಾಜ್ಯಪಾಲರು ಒಂದು ಕಡತವನ್ನು ಗರಿಷ್ಠ 6 ತಿಂಗಳು ಇಟ್ಟುಕೊಳ್ಳಬೇಕು. ನಂತರ ಸರ್ಕಾರಕ್ಕೆ ಮರಳಿ ಕಳುಹಿಸಬೇಕು. ಒಂದು ವೇಳೆ ಸರ್ಕಾರಕ್ಕೆ ಬಂದಿದ್ದರೆ, ಆಗ ಸರ್ಕಾರದ ತಪ್ಪಾಗುತ್ತದೆ. ರಾಜ್ಯಪಾಲರೇ ಇಟ್ಟುಕೊಂಡಿದ್ದರೆ ಅದು ಅವರ ತಪ್ಪು. ಅದನ್ನು ಮೊದಲು ಅರಿತುಕೊಳ್ಳೋಣ ಎಂದು ತಿಳಿಸಿದರು.
ಅರವಿಂದ ಏಗನಗೌಡರ ಮಾತನಾಡಿ, 15 ದಿನ ನಿರಂತರ ಹೋರಾಟ ಮಾಡೋಣ. ಆಮೇಲೆ ಸಹಿ ಸಂಗ್ರಹ ಮಾಡೋಣ. ಧಾರವಾಡ ಪ್ರತೇಕ ಮಹಾನಗರ ಪಾಲಿಕೆ ಹೋರಾಟ ಸಮಿತಿ ಹೆಸರಿನಲ್ಲೇ ಹೋರಾಟ ನಡೆಯಲಿ ಎಂದು ಸಲಹೆ ನೀಡಿದರು.
ಮಾಜಿ ಮೇಯರ್ ದಾನಪ್ಪ ಕಬ್ಬೇರ ಮಾತನಾಡಿ, ಧಾರವಾಡ ಅಭಿವೃದ್ಧಿ ದೃಷ್ಟಿಯಿಂದ ಹೋರಾಟಕ್ಕೆ ನಿಂತರೆ ಯಾರೂ ಪಕ್ಷಕ್ಕೆ ಮಣೆ ಹಾಕಬಾರದು. ಪ್ರತ್ಯೇಕ ಪಾಲಿಕೆ ಹೋರಾಟದಲ್ಲಿ ಜೈಲಿಗೆ ಹೋಗಲು ಸಿದ್ಧ ಎಂದರು.
ಪಾಲಿಕೆ ಸದಸ್ಯ ರಾಜಶೇಖರ ಕಮತಿ ಮಾತನಾಡಿ, ಧಾರವಾಡದ ಒಂದೊAದು ವಾರ್ಡ್ನಿಂದ ಉಗ್ರ ಹೋರಾಟ ಹಮ್ಮಿಕೊಳ್ಳೋಣ. ಪಾಲಿಕೆ¬ಂದ 1200 ಪುಟಗಳ ದಾಖಲೆ ಕಳುಹಿಸಲಾಗಿದೆ. ಅದನ್ನೂ ಇಟ್ಟುಕೊಂಡು ಹೋರಾಟ ಮಾಡೋಣ. ಆಟೋ ಮೂಲಕ ಜನರಲ್ಲಿ ಜಾಗೃತಿ ಮೂಡಿಸೋಣ. ಹೋರಾಟಕ್ಕೆ ಯುವಕರನ್ನು ಸೇರಿದುವ ಜವಾಬ್ದಾರಿ ತರಗೆದುಕೊಳ್ಳುತ್ತೇನೆ ಎಂದರು.
ಬಸವರಾಜ ಜಾಧವ ಮಾತನಾಡಿ, ಶಾಸಕರ ಮನೆ ಮುಂದೆ ಧರಣಿ ಮಾಡಿ, ಒಮ್ಮೆ ಧಾರವಾಡ ಬಂದ್ ಕರೆ ನೀಡಬೇಕು. ಅಂದರೆ ಬಿಸಿ ಮುಟ್ಟುತ್ತದೆ. ಸರ್ಕಾರವೂ ನಮ್ಮ ಕಡೆ ತಿರುಗಿ ನೋಡುತ್ತದೆ ಎಂದರು.
ದೀಪಕ ಚಿಂಚೋರೆ ಮಾತನಾಡಿ, ನಮ್ಮ ಸರ್ಕಾರ ಈಗಾಗಲೇ ನಿರ್ಧಾರ ಮÁಡಿ ರಾಜ್ಯಪಾಲರಿಗೆ ಕಳುಹಿಸಿದೆ. ಸರ್ಕಾರದ ವಿರುದ್ಧ ಹೋರಾಟ ಬೇಡ. ರಾಜ್ಯಪಾಲರ ಮೇಲೆ ಒತ್ತಡ ಹಾಕುವುದಾದರೆ ನಾನು ಭಾಗವಹಿಸುವೆ ಎಂದರು.
ಧರಣಿ ಸತ್ಯಾಗ್ರಹದ ನಂತರವೂ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ `ಧಾರವಾಡ ಬಂದ್' ಮಾಡುವ ಮೂಲಕ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಈ ಹೋರಾಟಗಾರರು ಎಚ್ಚರಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ವಿಠ್ಠಲ ಕಮ್ಮಾರ, ಗೌರಮ್ಮ ಬಲೋಗಿ, ಕವಿತಾ ಕಬ್ಬೇರ, ಈಶ್ವರ ಶಿವಳ್ಳಿ ಇತರರು ಭಾಗವಹಿಸಿದ್ದರು.