contech conference ಹುಬ್ಬಳ್ಳಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾನ್​ಟೆಕ್​ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ ಸಮಾರಂಭದಲ್ಲಿ ಡಾ. ವಿ. ರಾಮಚಂದ್ರ, ಡಾ. ಪ್ರಕಾಶ ತೆವರಿ, ಸುರೇಶ ಕಿರೇಸೂರ, ಪ್ರೊ. ಎಂ.ಆರ್​. ಪಾಟೀಲ, ಇತರರು ಇದ್ದರು. 
ಧಾರವಾಡ

contech conference ಕಾಂಕ್ರಿಟ್​ಗೆ ಗುಣಮಟ್ಟದ ಸ್ಪರ್ಶ ನೀಡಿ

ಪ್ರಮುಖ ಮುಖ್ಯಾಂಶಗಳು

  • ಐಸಿಐ ಅಧ್ಯಕ್ಷ ಡಾ. ವಿ. ರಾಮಚಂದ್ರ ಸಲಹೆ
  • ಕಾನ್​ಟೆಕ್​ ವಿಚಾರ ಸಂಕಿರಣ ಉದ್ಘಾಟನೆ

ಹುಬ್ಬಳ್ಳಿ: contech conference ಭೂಮಿಯ ಮೇಲೆ ಅತಿ ಹೆಚ್ಚು ಉತ್ಪಾದಿಸಲ್ಪಡುವ ವಸ್ತು ಕಾಂಕ್ರಿಟ್​, ಇದಕ್ಕೆ ಮೊದಲಿಗಿಂತಲೂ ಹೆಚ್ಚಿನ ಗುಣಮಟ್ಟದ ಅವಶ್ಯಕತೆ ಇದೆ. ಅದರಂತೆ ಅದರ ಶಕ್ತಿ, ಬಾಳಿಕೆ, ಕಾರ್ಯಸಾಧ್ಯತೆ, ಸುಸ್ಥಿರತೆ ಹೆಚ್ಚಿಸುವುದು ಮುಖ್ಯವಾಗಿದೆ ಎಂದು ಐಸಿಐ ರಾಷ್ಟ್ರೀಯ ಅಧ್ಯಕ್ಷ ಡಾ. ವಿ. ರಾಮಚಂದ್ರ ಹೇಳಿದರು.

ಇಂಡಿಯನ್​ ಕಾಂಕ್ರಿಟ್​ ಇನ್​ಸ್ಟಿಟ್ಯೂಟ್​ (ಐಸಿಐ) ಹುಬ್ಬಳ್ಳಿ ಧಾರವಾಡ ಕೇಂದ್ರ ಹಾಗೂ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿವಿಲ್​ ಇಂಜಿನಿಯರಿಂಗ್​ ವಿಭಾಗದ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಐಸಿಐ ಸಂಘಟನೆ ಶಿಕ್ಷಣ, ತರಬೇತಿ, ಸಂಶೋಧನೆ ಹಾಗೂ ಕಾರ್ಯ ಕೌಶಲಕ್ಕೆ ಹೆಚ್ಚು ಒತ್ತು ನೀಡುತ್ತದೆ. ಇಂತಹ ವಿಚಾರ ಸಂಕಿರಣಗಳು ಇನ್ನಷ್ಟು ಸುಧಾರಣೆಗೆ ನೆರವಾಗುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ ಡಾ. ಪ್ರಕಾಶ ತೆವರಿ ಮಾತನಾಡಿ, ಕೇವಲ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಷ್ಟೇ ಅಲ್ಲ ಈ ಭಾಗದ ವೃತ್ತಿಪರ ಇಂಜಿನಿಯರ್​ಗಳ ಕೌಶಲ ಅಭಿವೃದ್ಧಿ, ನವೀನ ತಂತ್ರಜ್ಞಾನವನ್ನು ಪರಿಚಯಿಸಲು ವಿಶ್ವವಿದ್ಯಾಲಯ ಶ್ರಮಿಸುತ್ತಿದೆ ಎಂದರು.
ಐಸಿಐ ಹುಧಾ ಅಧ್ಯಕ್ಷ ಸುರೇಶ ಕಿರೇಸೂರ ಮಾತನಾಡಿ, ಇತ್ತೀಚಿನ ಕೆಲ ಕಳಪೆ ಕಾಮಗಾರಿಗಳು ಸಿವಿಲ್​ ಇಂಜಿನಿಯರಿಂಗ್​ ಕ್ಷೇತ್ರಕ್ಕೆ ಕಳಂಕ ತರುತ್ತಿವೆ. ಈ ಹಿನ್ನೆಲೆಯಲ್ಲಿ ಸಿವಿಲ್​ ಕಾಮಗಾರಿಗಳ ಗುಣಮಟ್ಟ ಹೆಚ್ಚಿಸಲು ಕರ್ನಾಟಕ ಸಿವಿಲ್​ ಇಂಜಿನಿಯರ್​ಗಳ ಕಾಯ್ದೆ ಆದಷ್ಟು ಬೇಗ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಕೆಎಲ್​ಇ ತಾಂತ್ರಿಕ ವಿವಿ ಸಿವಿಲ್​ ಇಂಜಿನಿಯರಿಂಗ್​ ವಿಭಾಗ ಮುಖ್ಯಸ್ಥ ಪ್ರೊ. ಎಂ.ಆರ್​. ಪಾಟೀಲ ಸ್ವಾಗತಿಸಿದರು. ಪ್ರೇಮಾನಂದ ಶೆಟ್ಟಿ ವಂದಿಸಿದರು.