ಕೇಂದ್ರ ಸರ್ಕಾರದ ಇಂಧನ ದರ ಏರಿಕೆ ಖಂಡಿಸಿ (congress protest) ಹು-ಧಾ ಮಹಾನಗರ ಜಿಲ್ಲಾ ಹಾಗೂ ಗ್ರಾಮೀಣ ಜಿಲ್ಲಾ ಘಟಕದ ಕಾಂಗ್ರೆಸ್ ಕಾರ್ಯಕರ್ತರು, ಹುಬ್ಬಳ್ಳಿಯಲ್ಲಿ ಶನಿವಾರ ಎತ್ತಿನ ಗಾಡಿ (ಚಕ್ಕಡಿ) ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ: ಕೇಂದ್ರ ಸರ್ಕಾರದ ಇಂಧನ ದರ ಏರಿಕೆ ಖಂಡಿಸಿ (congress protest) ಹು-ಧಾ ಮಹಾನಗರ ಜಿಲ್ಲಾ ಹಾಗೂ ಗ್ರಾಮೀಣ ಜಿಲ್ಲಾ ಘಟಕದ ಕಾಂಗ್ರೆಸ್ ಕಾರ್ಯಕರ್ತರು, ನಗರದಲ್ಲಿ ಶನಿವಾರ ವಿನೂತನ ಪ್ರತಿಭಟನೆ ನಡೆಸಿದರು.
ಇಲ್ಲಿಯ ಲ್ಯಾಮಿಂಗ್ಟನ್ ಶಾಲೆ ಹತ್ತಿರದ ಕಾಂಗ್ರೆಸ್ ಕಚೇರಿಯಿಂದ ತಹಸೀಲ್ದಾರ್ ಕಚೇರಿವರೆಗೆ ಎತ್ತಿನಗಾಡಿ (ಚಕ್ಕಡಿ) ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮಹೇಶ ಗಸ್ತೆ ಅವರ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು.
ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರವು ಮಧ್ಯಪ್ರಾಚ್ಯ ಯುದ್ಧದ ನೆಪವೊಡ್ಡಿ ತೈಲ ದರ ಹೆಚ್ಚಿಸಿದೆ. ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಜನರಿಗೆ ಹೊರೆಯಾಗದಂತೆ ಸಬ್ಸಿಡಿ ನೀಡಿದ್ದರು. ಕೇಂದ್ರದ ಬಿಜೆಪಿ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚ ರಾಜ್ಯ ಚುನಾವಣೆ ಇದ್ದಾಗ ತೈಲ ಬೆಲೆ ಹೆಚ್ಚಿಸಬೇಕಿತ್ತು. ಬಿಜೆಪಿ ಬಡವರ, ಮಧ್ಯಮ ವರ್ಗದವರ ಪರ ಸರ್ಕಾರವಲ್ಲ. ರಾಜಕೀಯಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ತೈಲ ಬೆಲೆ ಏರಿಸಿದ್ದು, ಖಂಡನೀಯ. ತಕ್ಷಣ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಮಾತನಾಡಿ, ಕೇಂದ್ರ ಸರ್ಕಾರವು ತೈಲ ಬೆಲೆ ಹೆಚ್ಚಿಸಿರುವುದನ್ನು ನೋಡಿದರೆ ಖಜಾನೆ ಖಾಲಿಯಾಗಿದೆ ಎಂದೆನಿಸುತ್ತಿದೆ. ಅಂಬಾನಿ ಹಾಗೂ ಅದಾನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ದರ ಹೆಚ್ಚಿಸಿ ಬಡವರಿಗೆ ಅನ್ಯಾಯ ಮಾಡುತ್ತಿದೆ. ಬಿಜೆಪಿ ಅವರಿಗೆ ಬಹುಶಃ ಇದೇ ‘ಅಚ್ಛೇ ದಿನ್’ ಇರಬೇಕು ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ, ಪ್ರಮುಖರಾದ ಅಲ್ತಾಫ್ ಕಿತ್ತೂರ, ಅರ್ಜುನ ಪಾಟೀಲ, ಶಿವಾನಂದ ಮುತ್ತಣ್ಣವರ, ಪ್ರೇಮನಾಥ ಚಿಕ್ಕತುಂಬಳ, ಎಸ್.ಆರ್. ಪಾಟೀಲ, ದೊಡ್ಡರಾಮಪ್ಪ ದೊಡ್ಡಮನಿ, ಚಂದ್ರಶೇಖರ ಜುಟ್ಟಲ, ಬಸವರಾಜ ಬೆಣಕಲ್, ಮಹೇಶ ದಬಾಡೆ, ಬಾಳಮ್ಮ ಜೋಗಿನವರ, ಸ್ನೇಹಲತಾ ಪೂಜಾರ ಇತರರಿದ್ದರು.