ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಕಾಂಗ್ರೆಸ್ನವರೇ ಅವರ ಸ್ಟ್ರಿಂಗ್ ವಿಡಿಯೋ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಡಿಯೋ ಸ್ಟಿಂಗ್ ಮಾಡಿದವರ ಮೇಲೆ ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ, ವಿಡಿಯೋ ಹರಿಬಿಟ್ಟವರನ್ನು ಬಂಧಿಸಿದೆ. ಈ ಪ್ರಕರಣದ ಸೂತ್ರದಾರಿಗಳು ಹಾಗೂ ಪಾತ್ರದಾರಿಗಳು ಕಾಂಗ್ರೆಸ್ನವರೇ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಬರಗಾಲ ತಲೆದೋರಿದೆ. ಕುಡಿಯುವ ನೀರಿನ ಸಮಸ್ಯೆ, ಸಮರ್ಪಕ ವಿದ್ಯುತ್ ಪೂರೈಕೆ ಅಭಾವ ಸೇರಿ ಹಲವಾರು ಸಮಸ್ಯೆಗಳ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಆಗಬೇಕಿತ್ತು. ಆದರೆ, ಸಂಪುಟದಲ್ಲಿ ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಗ್ಯಾರಂಟಿ ಯೋಜನೆಗಳು ಪಂಚರ್ ಆಗಿವೆ. ಗೃಹಲಕ್ಷ್ಮೀ ಹಗರಣದ ಬಗ್ಗೆ ಇನ್ನೂ ಉತ್ತರ ಸಿಕ್ಕಿಲ್ಲ. ಶಕ್ತಿ ಯೋಜನೆಯಿಂದಾಗಿ ಕೆಎಸ್ಆರ್ಟಿಸಿ ನಿಶಕ್ತಿಯಾಗಿದೆ. ಸಾರಿಗೆ ನೌಕರರ ಸಂಬಳವನ್ನು ಬಸ್ಗಳ ಡೀಸೆಲ್ಗಾಗಿ ಬಳಸಲಾಗುತ್ತಿದೆ ಎಂದು ಹೇಳಿದರು.
ಬೆಲೆ ಏರಿಕೆ ಗ್ಯಾರಂಟಿ, ಭ್ರಷ್ಟಾಚಾರದ ಗ್ಯಾರಂಟಿಗಳೇ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳು. ಉಸಿರಾಡುವ ಗಾಳಿ ಹೊರತುಪಡಿಸಿ ಅಡುಗೆ ಎಣ್ಣೆಯಿಂದ ಕುಡಿಯುವ ನೀರಿನವರೆಗೆ ಎಲ್ಲ ದರ ಏರಿಕೆಯಾಗಿದೆ. ಮುಡಾ, ವಾಲ್ಮೀಕಿ, ಭೋವಿ ಅಭಿವೃದ್ಧಿ ನಿಗಮ, ಕಾರ್ವಿುಕ ಇಲಾಖೆ ಸೇರಿ ಹತ್ತಾರು ಹಗರಣಗಳೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಸುದ್ದಿಗೋಷ್ಠಿಯಲ್ಲಿ ಇದ್ದರು.