ಪ್ರಧಾನಿ ನರೇಂದ್ರ ಮೋದಿ (Congress) ಅವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆಗೆ ಭಾನುವಾರ ವ್ಯವಸ್ಥೆ ಮಾಡಲಾಗಿದ್ದ ಹುಬ್ಬಳ್ಳಿ ಬೆಂಗೇರಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದರು. ಮಹೇಶ ಟೆಂಗಿನಕಾಯಿ, ಶಂಕರಣ್ಣ ಮುನವಳ್ಳಿ, ರಾಜಣ್ಣ ಕೊರವಿ, ಮಹದೇವ ನರಗುಂದ, ಇತರರು ಇದ್ದರು. 
ಧಾರವಾಡ

ಕಾಂಗ್ರೆಸ್ (Congress) ಹೈ ಕಮಾಂಡ್ ಅಸಹಾಯಕ

ಸಂತೋಷ ವೈದ್ಯ
ಹುಬ್ಬಳ್ಳಿ: ದೇಶದಲ್ಲಿ ಎಲ್ಲಿಯೂ ಇಲ್ಲದ ರಾಜಕೀಯ ಅಸ್ಥಿರತೆ ರಾಜ್ಯದಲ್ಲಿದೆ. ಇದಕ್ಕೆ ಕಾಂಗ್ರೆಸ್ ಹೈ ಕಮಾಂಡ್​ನ ಅಸಹಾಯಕ ಸ್ಥಿತಿಯೇ ಕಾರಣ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ಹುಬ್ಬಳ್ಳಿ ಬೆಂಗೇರಿಯಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈ ಕಮಾಂಡ್​ಗೆ ಕಮಾಂಡ್ ಇದ್ದಿದ್ದೇ ಆದಲ್ಲಿ ತಕ್ಷಣ ಈ ರಾಜಕೀಯ ಅಸ್ಥಿರತೆ ಕೊನೆಗಾಣಿಸಿ ರಾಜ್ಯದಲ್ಲಿ ಸುಸ್ಥಿರ ಸರ್ಕಾರಕ್ಕೆ ದಾರಿ ಮಾಡಿಕೊಡಬೇಕು.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಅಗಿರುವ ಬಗ್ಗೆ ಹೈ ಕಮಾಂಡ್ ಸ್ಪಷ್ಟ ಪಡಿಸಬೇಕು. ಇಲ್ಲವೇ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಹೇಳಬೇಕು. ಅದಾಗದಿದ್ದಲ್ಲಿ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲಿ ಎಂದು ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಕರೆದ ಬ್ರೇಕ್​ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ ಮಾಧ್ಯಮಗಳೆದುರು ಒಟ್ಟಾಗಿ ಕಾಣಿಸಿಕೊಂಡು ಹೈಕಮಾಂಡ್ ಮಾತೇ ಅಂತಿಮ ಎಂದು ಹೇಳಿದ್ದಾರೆ. ಈ ಮಾತನ್ನು ಕಾಂಗ್ರೆಸ್ಸಿಗರು ಪ್ರತಿ ದಿನವೂ ಹೇಳುತ್ತಾರೆ. ಇಷ್ಟು ಹೇಳುವುದಕ್ಕೆ ಅಷ್ಟು ದೊಡ್ಡ ಮೀಟಿಂಗ್ ಮಾಡುವ ಅಗತ್ಯವಿರಲಿಲ್ಲ. ಬ್ರೇಕ್​ಫಾಸ್ಟ್ ನೆಪದಲ್ಲಿ ಅರ್ಧ ಇಡ್ಲಿ ತಿನ್ನಬೇಕಿತ್ತೇ? ಅಪ್ರಬುದ್ಧತೆಯ ಪ್ರತೀಕ ಇದು. ಕೊನೆಗೆ ಕಾಂಗ್ರೆಸ್ಸಿನಲ್ಲಿ ಸೋನಿಯಾ, ರಾಹುಲ ಅವರಂಥ ನಕಲಿ ಗಾಂಧಿಗಳದ್ದೇ ನಡೆಯುವುದು ಎಂದು ಆರೋಪಿಸಿದರು.
ಬ್ರೇಕ್ ಫಾಸ್ ಮೀಟಿಂಗ್ ಬಳಿಕ ಸಿಎಂ-ಡಿಸಿಎಂ ಇಬ್ಬರು ಆಲ್ ಇಸ್ ವೆಲ್ ಎಂದು ಹೇಳಿದ್ದಾರೆ. ಕಾಂಗ್ರೆಸ್​ನಲ್ಲಿ ಯಾವುದೂ ವೆಲ್ (ಸರಿ) ಆಗಿಲ್ಲ. ಇಬ್ಬರೂ ಒಬ್ಬರಿಗೊಬ್ಬರು ವೆಲ್ (ಬಾವಿಗೆ)ಗೆ ತಳ್ಳಬೇಕೆಂದು ವಿಚಾರ ಮಾಡುತ್ತಲೇ ಇರುತ್ತಾರೆ. ಸಿಎಂ ಕುರ್ಚಿ ಗುದ್ದಾಟಕ್ಕೆ ಕದನ ವಿರಾಮ ಬಿದ್ದಿಲ್ಲ. ಮುಸುಕಿನ ಗುದ್ದಾಟ ನಡೆದೇ ಇದೆ. ಈ ಬಡಿದಾಟದಲ್ಲಿ ರಾಜ್ಯದ ಹಿತವನ್ನು, ರೈತರ ಸಂಕಷ್ಟ ಸ್ಥಿತಿಯನ್ನು ಮರೆತು ಬಿಟ್ಟಿದ್ದಾರೆ ಎಂದು ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಮನ್ ಕೀ ಬಾತ್ ಪ್ರೇರಣೆ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಯುವ ಸಮುದಾಯಕ್ಕೆ ಪ್ರೇರಣೆಯಾಗಿದೆ. ಪ್ರತಿ ಬಾರಿಯೂ ಪ್ರಧಾನಿ ಮೋದಿ ಅವರು ದೇಶದೆಲ್ಲೆಡೆಯ ಹೊಸ ಹೊಸ ವಿಚಾರ, ಸಂಗತಿ, ಯೋಜನೆಗಳನ್ನು ಪ್ರಸ್ಥಾಪಿಸುತ್ತಿದ್ದಾರೆ. ಇದು ಎಲ್ಲರಿಗೂ ಪ್ರೇರಣದಾಯಕವಾಗಿದೆ ಎಂದರು.
ಬೆಂಗೇರಿಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಹು-ಧಾ ಮಹಾನಗರ ಜಿಲ್ಲಾ ಎಸ್​ಟಿ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ 128ನೇ ಮನ್ ಕೀ ಬಾತ್ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಮಹೇಶ ಟೆಂಗಿನಕಾಯಿ, ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಮಹದೇವ ನರಗುಂದ, ಅಶೋಕ ವಾಲ್ಮೀಕಿ, ಇತರರು ಇದ್ದರು.