congress ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ. 
ಧಾರವಾಡ

ವಿದ್ಯುತ್ ಏರಿಕೆಗೆ ಮುಂದಾದ ಕಾಂಗ್ರೆಸ್ ಸರ್ಕಾರ congress

ಪ್ರಮುಖ ಮುಖ್ಯಾಂಶಗಳು

  • ಅಗತ್ಯ ವಸ್ತುಗಳ ದರ ಹೆಚ್ಚಳದಲ್ಲಿ ಸರ್ವಕಾಲಿಕ ದಾಖಲೆಯ ಆರೋಪ
  • ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರತ್ತ ಗಮನ ಹರಿಸಬೇಕು.
  • ವಿದ್ಯುತ್ ಕಂಪನಿಗಳಿಗೆ ನೀಡಬೇಕಿರುವ ಬಾಕಿ ಹಣ ಸರ್ಕಾರ ಇನ್ನೂ ಪಾವತಿಸಿಲ್ಲ.
  • ರಾಜ್ಯದ ವಿತ್ತೀಯ ಸ್ಥಿತಿ ದುರ್ಬಲವಾಗಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹೋಪಯೋಗಿ, ಕೈಗಾರಿಕೆ ಹಾಗೂ ವಾಣಿಜ್ಯೋಪಯೋಗಿ ವಿದ್ಯುತ್ ದರವನ್ನು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ.
ಮೊದಲೇ ಕೈಗಾರಿಕೆಗಳ ವಿರೋಧಿಯಾಗಿರುವ ರಾಜ್ಯ ಸರ್ಕಾರದ ಕ್ರಮದಿಂದಾಗಿ ಕೈಗಾರಿಕೆಗಳು ರಾಜ್ಯಕ್ಕೆ ಬರಲು ಹಿಂದೇಟು ಹಾಕುತ್ತಿವೆ ಎಂದು ದೂರಿದರು.
ವಿದ್ಯುತ್ ಕಂಪನಿಗಳಿಗೆ ನೀಡಬೇಕಿರುವ ಬಾಕಿ ಹಣ ಸರ್ಕಾರ ಇನ್ನೂ ಪಾವತಿಸಿಲ್ಲ. ಇದರ ಪರಿಣಾಮ ವಿದ್ಯುತ್ ಕಂಪನಿಗಳು ದರ ಏರಿಕೆಯ ಪ್ರಸ್ತಾಪ ನೀಡಿದ್ದು, ಸರ್ಕಾರ ಸಹ ಹಸಿರು ನಿಶಾನೆ ತೋರಿದೆ ಎಂದು ಆರೋಪಿಸಿದರು.
ರಾಜ್ಯದ ವಿತ್ತೀಯ ಸ್ಥಿತಿ ದುರ್ಬಲವಾಗಿದೆ. ದುರ್ಬಲ ಆರ್ಥಿಕ ನೀತಿಯಿಂದಾಗಿ ಗೂಗಲ್ ಕಂಪನಿ ರಾಜ್ಯದಿಂದ ಹೊರಹೋಗಿದೆ.
ರಾಜ್ಯ ಸರ್ಕಾರ 8.4 ಲಕ್ಷ ಕೋಟಿ ರೂ. ಸಾಲ ಮಾಡಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಸಚಿವರು ಭಾರತದ ಜಿಡಿಪಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಡಿಸಿಎಂ ಡಿ.ಕೆ. ಶಿವಕುಮಾರ ಮತ್ತು ನಾನು ಹಾಲು ಜೇನು ಇದ್ದಂತೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಹಾಸ್ಯಾಸ್ಪದವಾಗಿದೆ. ಅವರದ್ದು ಆಲ್ಕೋಹಾಲ್ ಹಾಗೂ ಲಿಂಬೆಹಣ್ಣಿನಂತಹ ಸಂಬಂಧ ಎಂದು ಸಚಿವ ಜೋಶಿ ವ್ಯಂಗ್ಯವಾಡಿದರು.
ಕಾಂಗ್ರೆಸ್​ನಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಹಾಸ್ಯಾಸ್ಪದವಾಗಿದೆ. ಗಾಂಧಿ ಕುಟುಂಬವೊಂದರಲ್ಲಿಯೇ ಮೂವರು ಸಂಸದರಾಗಿರುವುದು ಆ ಪಕ್ಷದ ಕುಟುಂಬ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದು ಲೇವಡಿ ಮಾಡಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಜಿ ಸಿಎಂ ದಿ. ಜೆ.ಎಚ್. ಪಟೇಲ ಅವರೊಂದಿಗೆ ಜೈಲು ಸೇರಿದ್ದ ಈಗಿನ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷವನ್ನು ಮನಬಂದಂತೆ ಹೀಯಾಳಿಸಿದ್ದನ್ನು ಜನರು ಮರೆಯುವುದಿಲ್ಲ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರನ್ನು ನಿರುದ್ಯೋಗಿಗಳೆಂದು ಟೀಕಿಸುವ ಮೊದಲು ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರತ್ತ ಗಮನ ಹರಿಸಬೇಕು ಎಂದು ಹೇಳಿದರು.
ಫೋನ್ ಕದ್ದಾಲಿಕೆ ಉನ್ನತ ಮಟ್ಟದ ತನಿಖೆಯಾಗಲಿ : ಟೆಲಿಫೋನ್ ಕದ್ದಾಲಿಕೆ ಬಗ್ಗೆ ಗಂಭೀರ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಗುಪ್ತ ಮಾಹಿತಿ ಕಲೆ ಹಾಕುತ್ತಿರುವುದಾಗಿ ಸ್ವತಃ ಗೃಹ ಸಚಿವ ಪರಮೇಶ್ವರ ಅವರೇ ಒಪ್ಪಿಕೊಂಡಿದ್ದು, ಯಾವ ಕಾರಣಕ್ಕೆ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಹೇಳಿದರು.
ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗಲೂ ಫೋನ್ ಕದ್ದಾಲಿಕೆ ನಡೆದಿತ್ತೆಂದು ಹೇಳುವ ಕಾಂಗ್ರೆಸ್ ಮುಖಂಡರು, ಆ ಸಮಯದಲ್ಲಿ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದರೆಂಬುದನ್ನು ಮರೆತಂತಿದೆ ಎಂದರು. ನಂತರದ ಕಾಂಗ್ರೆಸ್ ಆಡಳಿತದಲ್ಲಿ ಆಗಿನ ಫೋನ್ ಕದ್ದಾಲಿಕೆ ಬಗ್ಗೆ ತನಿಖೆ ನಡೆಸುವುದನ್ನು ಬಿಟ್ಟು, ಮುಖ್ಯಮಂತ್ರಿ ಸಿದ್ದರಾಮಯ್ಯ ಕತ್ತೆ ಕಾಯುತ್ತಿದ್ದರೇ ? ಎಂದು ಪ್ರಶ್ನಿಸಿದರು.
ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಸಂಬಂಧಿಸಿದಂತೆ ರ್ಚಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ ದೆಹಲಿಗೆ ಆಗಮಿಸಿದರೆ, ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು ಎಂದರು.
ಅಣೆಕಟ್ಟು ಎತ್ತರಕ್ಕೆ ಆಂದ್ರಪ್ರದೇಶ ಸರ್ಕಾರ ಅಡ್ಡಗಾಲು ಹಾಕುತ್ತಿದ್ದು, ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಬೇಕೆಂದು ಡಿಸಿಎಂ ಡಿ.ಕೆ. ಶಿವಕುಮಾರ ಆಗ್ರಹಿಸಿದ್ದಾರೆ. ಕರ್ನಾಟಕದ ಹಿತದೃಷ್ಟಿಯಿಂದ ಅಗತ್ಯ ಸಹಾಯ ಮಾಡಲಾಗುವುದು ಎಂದು ಹೇಳಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಆಲಮಟ್ಟಿ ಜಲಾಶಯ ಅಭಿವೃದ್ಧಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿತ್ತು. ಆದರೆ, ಆ ಭರವಸೆ ಈಡೇರಲೇ ಇಲ್ಲ ಎಂದು ಹೇಳಿದರು.