ಮಲ್ಲಿಕಾರ್ಜುನ ಚಿಕ್ಕಮಠ 
ಧಾರವಾಡ

ಶಿಕ್ಷಣ ಇಲಾಖೆಯ ದಿಢೀರ್​ ನಿರ್ಧಾರದಿಂದ ಗೊಂದಲ

ಧಾರವಾಡ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿ ತೃತೀಯ ಭಾಷೆಗೆ ಗ್ರೇಡ್​ ನೀಡುವ ಶಿಕ್ಷಣ ಇಲಾಖೆಯ ದಿಢೀರ್​ ನಿರ್ಧಾರ ಗೊಂದಲಕ್ಕೆ ಕಾರಣವಾಗಿದೆ ಎಂದು ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಚಿಕ್ಕಮಠ ಹೇಳಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಪೂರ್ವ ಸಮಾಲೋಚನೆ ನಡೆಸದೆ, ಅಂತಿಮ ಕ್ಷಣದಲ್ಲಿ 3ನೇ ಭಾಷೆಯ ಮಹತ್ವವನ್ನು ತಗ್ಗಿಸುವ ಅಥವಾ ಬದಲಾವಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದು ಲಕ್ಷಾಂತರ ವಿದ್ಯಾಥಿರ್ಗಳು, ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. 3ನೇ ಭಾಷೆಯು ಕೇವಲ ಒಂದು ಪಠ್ಯವಿಷಯವಲ್ಲ. ಅದು ವಿದ್ಯಾಥಿರ್ಗಳ ಬಹುಭಾಷಾ ಸಾಮರ್ಥ್ಯ ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ಪೂರಕವಾಗಿದೆ.
ಮೂರನೇ ಭಾಷೆಯನ್ನು ರ್ದುಬಲಗೊಳಿಸಿದರೆ ಪರೋಕ್ಷವಾಗಿ ಕನ್ನಡ ಭಾಷೆಯ ಪ್ರಾಮುಖ್ಯತೆಗೂ ಧಕ್ಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಸಂಕಷ್ಟದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳು ಇಂತಹ ನಿರ್ಧಾರಗಳಿಂದ ಮುಚ್ಚುವ ಹಂತಕ್ಕೆ ತಲುಪಬಹುದು. ಗ್ರೇಡ್​ ಪದ್ಧತಿಯ ಬದಲಿಗೆ, ಕೇಂದ್ರ ಮಂಡಳಿಗಳ ಮಾದರಿಯಲ್ಲಿ ವೈಜ್ಞಾನಿಕವಾಗಿ ಪರೀಕ್ಷಾ ಭಾರವನ್ನು ಕಡಿಮೆ ಮಾಡಬೇಕು. ಶಿಕ್ಷಣ ತಜ್ಞರು ಮತ್ತು ಪಾಲುದಾರರ ಜತೆ ಚಚಿರ್ಸಿ ಸಮಗ್ರ ನಿರ್ಧಾರ ಕೈಗೊಳ್ಳಬೇಕು ಎಂದು ಚಿಕ್ಕಮಠ ಸಲಹೆ ನೀಡಿದ್ದಾರೆ.
ಏನೇ ಹೊಸ ಕ್ರಮಗಳನ್ನು ಜಾರಿಗೊಳಿಸಲು ಶೈಕ್ಷಣಿಕ ವರ್ಷಾರಂಭವೇ ಸೂಕ್ತ. ಅದು ಬಿಟ್ಟು ಶೈಕ್ಷಣಿಕ ವರ್ಷ ಮುಗಿದು, ಪರೀಕ್ಷೆ ಗಳು ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿಯ ದಿಢೀರ್​ ತೀರ್ಮಾನ ಹಾಗೂ ಇದೇ ಪರೀಕ್ಷೆಗೆ ಅನ್ವಯ ಎನ್ನುವುದು ಬುದ್ಧಿವಂತರ ನಿರ್ಧಾರ ಅಲ್ಲ ಎಂದು ಚಿಕ್ಕಮಠ ತಿಳಿಸಿದ್ದಾರೆ.