ಧಾರವಾಡ: ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಖಂಡಿಸಿ ಎಐಎಂಎಸ್‌ಎಸ್ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ‌ ಮನವಿ ರವಾನಿಸಿದರು. 
ಧಾರವಾಡ

ಅಪ್ರಾಪ್ತೆಯರ ಮೇಲಿನ ಅತ್ಯಾಚಾರಕ್ಕೆ ಖಂಡನೆ

ಧಾರವಾಡ: ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಶ್ಚಿಮ ಬಂಗಾಳದ ಬಾರುಪುರ್ ದಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಬಾವಿಗೆ ಎಸೆಯಲಾಗಿದೆ. ಬಾಲಕಿ ಮೃತಪಟ್ಟಿದ್ದಾಳೆ. ಮತ್ತೊಂದು ಘಟನೆಯಲ್ಲಿ ರಾಜಸ್ಥಾನದ ಶ್ರೀಗಂಗಾನಗರದಲ್ಲಿ 13 ವರ್ಷದ ಬಾಲಕಿಯನ್ನು ಆಟೋ ಚಾಲಕನೊಬ್ಬ ಹೋಟೆಲ್ ಮಾಲೀಕನಿಗೆ ಮಾರಾಟ ಮಾಡಿದ್ದನು. ಆ ಅಪ್ರಾಪ್ತೆಯನ್ನು 4-5 ದಿನಗಳವರೆಗೆ ಸುಮಾರು 30 ಜನ ಅತ್ಯಾಚಾರ ಮಾಡಿ, ಬಾಲಕಿಗೆ ತೀವ್ರ ಹಿಂಸಿಸಿ ಗಾಯಗೊಳಿಸಿದ್ದರು. ಆ ಬಾಲಕಿಯೂ ಮೃತಪಟ್ಟಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ಹಿನ್ನೆಲೆಯಲ್ಲಿ ರಾಜಸ್ಥಾನ ಸರ್ಕಾರವು ನಾಲ್ಕು ಹೋಟೆಲ್‌ಗಳನ್ನು ನೆಲಸಮ ಮಾಡಿದೆ. ಆದರೆ, ಎರಡು ಘಟನೆಗಳ ಎಲ್ಲ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು. ಸರ್ಕಾರದ ಯಾವುದೇ ಕಣ್ಣೊರೆಸುವ ತನಿಖೆಯಾನ್ನಾಗಲಿ ಅಥವಾ ನಿಧಾನ ಗತಿಯ ಶಿಕ್ಷೆಯನ್ನಾಗಲಿ ಸಹಿಸುವುದಿಲ್ಲ. ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ದೇಶದಾದ್ಯಂತ ಖಾತ್ರಿ ಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಾಮೂಹಿಕ ಹಾಗೂ ಸಾಮಾಜಿಕ ಮಾಧ್ಯಮಗಳನ್ನೂ ಒಳಗೊಂಡಂತೆ ಎಲ್ಲದರಲ್ಲೂ ಅಶ್ಲೀಲ ಚಿತ್ರಗಳನ್ನು ನಿಷೇಽಸಬೇಕು. ಮಧ್ಯಪಾನ ಮತ್ತು ಡ್ರಗ್ಸ್ ನಿಷೇಽಸಿ, ಹೆಣ್ಣುಮಕ್ಕಳ ಘನತೆ ಮತ್ತು ಗೌರವ ಖಾತ್ರಿ ಪಡಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಕೇಂದ್ರ ಮತ್ತು ಸಂಭಂದಪಟ್ಟ ರಾಜ್ಯ ಸರ್ಕಾರಗಳಿಗೆ ಮನವಿ ರವಾನಿಸಿದರು.
ಮಧುಲತಾ ಗೌಡರ್, ಗಂಗೂಬಾಯಿ ಕೋಕರೆ, ದೇವಮ್ಮ ದೇವತ್ಕಲ್ ಇತರರಿದ್ದರು.