ಮಾನಕ ಮಹೋತ್ಸವ ಅಂಗವಾಗಿ ಹುಬ್ಬಳ್ಳಿಯ ಬಿಐಎಸ್​ ಶಾಖಾ ಕಚೇರಿ ಹಾಗೂ ಧಾರವಾಡದ ಐಐಟಿ ಮಧ್ಯೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. 
ಧಾರವಾಡ

ಪ್ರಮಾಣೀಕರಣ ಕ್ಷೇತ್ರದಲ್ಲಿ ಸಹಯೋಗ

ಬಿಐಎಸ್​- ಐಐಟಿ ಮಧ್ಯೆ ಒಪ್ಪಂದ

ಹುಬ್ಬಳ್ಳಿ: ಇಲ್ಲಿಯ ಭಾರತೀಯ ಮಾನಕ ಸಂಸ್ಥೆಯ (ಬಿಐಎಸ್​) ಶಾಖಾ ಕಚೇರಿಯು ವಿಶ್ವ ಗುಣಮಟ್ಟ ದಿನಾಚರಣೆ ಅಂಗವಾಗಿ ಧಾರವಾಡದ ಐಐಟಿಯಲ್ಲಿ ಮಾನಕ ಮಹೋತ್ಸವ ಆಯೋಜಿಸಿತ್ತು.

ಶೈಕ್ಷಣಿಕ, ಕೈಗಾರಿಕಾ ಕ್ಷೇತ್ರ ಮತ್ತು ಬಿಐಎಸ್​ನ ಪ್ರತಿನಿಧಿಗಳು ಪಾಲ್ಗೊಂಡು ಪ್ರಮಾಣೀಕರಣದ ಮಹತ್ವ, ಗುಣಮಟ್ಟದ ಉತ್ಪಾದನೆ ಬಗೆಗಿನ ಜಾಗೃತಿ, ನಾವೀನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತು ಚರ್ಚಿಸಿದರು.

ಭಾರತೀಯ ಮಾನಕ ಸಂಸ್ಥೆ ಮತ್ತು ಐಐಟಿ ನಡುವೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು ) ಸಹಿ ಹಾಕಲಾಯಿತು. ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ರಾಜ್ಯ ಸಚಿವ ಬಿ.ಎಲ್​. ವರ್ಮಾ ಮತ್ತು ನಿಮುಬೆನ್​ ಜಯಂತಿಭಾಯ್​ ಬಂಭಾನಿಯಾ ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಪಾಲ್ಗೊಂಡರು.

ಎರಡು ಸಂಸ್ಥೆಗಳ ಮಧ್ಯದ ಸಹಯೋಗವು ಪ್ರಮಾಣೀಕರಣ ಜತೆಗೆ ಬಿಐಎಸ್​ ಮತ್ತು ಐಐಟಿ ನಡುವಿನ ಸಾಂಸ್ಥಿಕ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಐಐಟಿ ಧಾರವಾಡದ ನಿರ್ದೇಶಕ ವೆಂಕಪ್ಪಯ್ಯ ಆರ್​. ದೇಸಾಯಿ ಮಾತನಾಡಿ, ಗುಣಮಟ್ಟ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಮುನ್ನಡೆಸುವಲ್ಲಿ ಶೈಕ್ಷಣಿಕ ವಲಯ ಮತ್ತು ಭಾರತೀಯ ಮಾನಕ ಸಂಸ್ಥೆಯ ನಡುವಿನ ಸಹಯೋಗ ಬಹಳ ಮಹತ್ವದ್ದು ಎಂದು ಹೇಳಿದರು.

ಈ ಒಪ್ಪಂದವು ಶೈಕ್ಷಣಿಕ ಮತ್ತು ಕೈಗಾರಿಕಾ ವಲಯಗಳ ನಡುವಿನ ಸಂಪರ್ಕವನ್ನು ಬಲಪಡಿಸಲು, ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿ ಭಾರತೀಯ ಪ್ರಮಾಣೀಕರಣ ಅಳವಡಿಸಿಕೊಳ್ಳಲು ಮತ್ತು ಗುಣಮಟ್ಟ ಆಧಾರಿತ ಹಾಗೂ ಸುಸ್ಥಿರ ತಂತ್ರಜ್ಞಾನಗಳ ಅಭಿವೃದ್ಧಿಗೆ ಉತ್ತಮ ಅವಕಾಶ ಒದಗಿಸುತ್ತದೆ ಎಂದರು.

ತಾಂತ್ರಿಕ ಅಧಿವೇಶನಗಳ ಭಾಗವಾಗಿ, ಕಿರ್ಲೋಸ್ಕರ​ ಎಲೆಕ್ಟ್ರಿಕ್​ ಕಂಪನಿ ಲಿಮಿಟೆಡ್​ನ ಗುಣಮಟ್ಟ ವಿಭಾಗದ ಮುಖ್ಯಸ್ಥ ರೇವಣಸಿದ್ದಪ್ಪ ಡಿ.ಎನ್​., ಸುಸ್ಥಿರ ಅಭಿವೃದ್ಧಿ ಗುರಿ, ಶುದ್ಧ ಇಂಧನ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಐಐಟಿ ಧಾರವಾಡದ ಡೀನ್​ ಪ್ರೊ. ಧೀರಜ್​ ವಿ. ಪಾಟೀಲ್​ ವಿವಿಧ ವಿಷಯಗಳನ್ನು ಮಂಡಿಸಿದರು. ಬಿಐಎಸ್​ ಜಂಟಿ ನಿರ್ದೇಶಕ ಮೋಹಿತ್​ ಜನೋಯ್ಯಾ, ಬಿಐಎಸ್​ ಚಟುವಟಿಕೆಗಳ ಕುರಿತು ಪ್ರಸ್ತುತಪಡಿಸಿದರು.

ಬಿಐಎಸ್​ ಹುಬ್ಬಳ್ಳಿ ಶಾಖಾ ಕಚೇರಿಯ ವಿಜ್ಞಾನಿ-ಇ, ನಿರ್ದೇಶಕ ಮತ್ತು ಮುಖ್ಯಸ್ಥ ಪಿ.ಎನ್​. ಮುರಳಿ ಸ್ವಾಗತಿಸಿದರು. ಬಿಐಎಸ್​ ಜಂಟಿ ನಿರ್ದೇಶಕ ತುಷಾರ್​ ಶರ್ಮಾ ವಿಶ್ವ ಗುಣಮಟ್ಟ ದಿನಾಚರಣೆಯ ಸಂದೇಶ ವಾಚನ ಮಾಡಿದರು. ಬಿಐಎಸ್​ ಸಹಾಯಕ ನಿರ್ದೇಶಕ ಅಜಯ್​ ಚಕ್ರವರ್ತಿ ವಂದಿಸಿದರು.