ವಿಜಯವಾಣಿ ವರದಿ ಪರಿಣಾಮ 
ಧಾರವಾಡ

ಪೊಲೀಸರಿಗೆ ವರದಿ ಕೇಳಿದ ಸಿಎಂ ಕಚೇರಿ

ಜಗದೀಶ ಹೊಂಬಳಿ
ಧಾರವಾಡ: ನಗರದ ಪ್ರಮುಖ ವೃತ್ತಗಳಲ್ಲಿ ಒಂದಾದ ಧಾರವಾಡ ಕೋರ್ಟ್ ವೃತ್ತದ ಸ್ವಯಂ ಚಾಲಿತ ಸಿಗ್ನಲ್‌ಗಳು ಎರಡು ವರ್ಷದಿಂದ ಕಾರ್ಯ ನಿರ್ವಹಿಸದೇ ಇರುವುದಕ್ಕೆ ಕಾರಣವೇನು? ಎಂದು ಮುಖ್ಯಮಂತ್ರಿ ಕಚೇರಿಯಿಂದ ಪೊಲೀಸ್ ಇಲಾಖೆಯನ್ನು ವರದಿ ಕೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮುಖ್ಯ ರಸ್ತೆಯಲ್ಲಿರುವ ಈ ಕೋರ್ಟ್ ವೃತ್ತದ ಅಕ್ಕ-ಪಕ್ಕದಲ್ಲಿ ಜಿಲ್ಲಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿ, ಉಪ ನೋಂದಣಿ ಅಽಕಾರಿ ಕಚೇರಿ, ರೈಲು ನಿಲ್ದಾಣ, ಪ್ರಮುಖ ಶಾಲೆ-ಕಾಲೇಜುಗಳಿವೆ. ನಿತ್ಯ ವಿಪರಿತ ಸಂಚಾರ ದಟ್ಟನೆ ಇದ್ದರೂ ವೃತ್ತದ ಸಿಗ್ನಲ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ವಿಜಯವಾಣಿ ಜೂ. 15ರ ಸಂಚಿಕೆಯಲ್ಲಿ `ಕೋರ್ಟ್ ವೃತ್ತದ ಸಿಗ್ನಲ್ 2 ವರ್ಷದಿಂದ ಬಂದ್' ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿ ಸಿಎಂ ಕಚೇರಿಗೆ ತಲುಪಿದ್ದರಿಂದ ಎಚ್ಚೆತ್ತುಕೊಂಡ ಸರ್ಕಾರ ಪ್ರಮುಖ ವೃತ್ತದಲ್ಲೇ ಸಿಗ್ನಲ್‌ಗಳು ಇಷ್ಟು ತಿಂಗಳಿಂದ ಏಕೆ ಬಂದ್ ಆಗಿವೆ ಎಂದು ವರದಿ ಕೇಳಿವೆ.
ಪೊಲೀಸ್ ಆಯುಕ್ತರ ಕಚೇರಿಯಿಂದ ಮುಖ್ಯಮಂತ್ರಿ ಕಚೇರಿಗೆ ಸಿಗ್ನಲ್ ಗಳು ಕಾರ್ಯ ನಿರ್ವಹಿಸದಿರುವ ಕುರಿತಂತೆ ಸ್ಪಷ್ಟೀಕರಣ ನೀಡಲಾಗಿದೆ. ಧಾರವಾಡ ಕೆಸಿಡಿ, ಎಲ್‌ಐಸಿ ಕಡೆಯಿಂದ ಹಾಯ್ದು ಬರುವ ಜನರು `ಧಾರವಾಡ ಹೋಟೆಲ್ ಕ್ರಾಸ್‌ನ ಬಸಪ್ಪ ಖಾನಾವಳಿ ರಸ್ತೆ' ಮೂಲಕ ಹು-ಧಾ ಮುಖ್ಯ ರಸ್ತೆ ಕ್ರಾಸ್ ಮಾಡಿ ಸಂಚರಿಸುತ್ತಾರೆ. ಇದರಿಂದ ಕೋರ್ಟ್ ವೃತ್ತದ ಸಿಗ್ನಲ್ ಆಪರೇಟ್ ಮಾಡುವುದಕ್ಕೆ ಕಷ್ಟವಾಗುತ್ತಿದೆ ಎಂದು ಪೊಲೀಸರು ಕಾರಣ ನೀಡಿದ್ದಾರೆ.