ಹುಬ್ಬಳ್ಳಿ: "ಸ್ವಚ್ಛತಾ ಮೇಂ ಸಹಭಾಗ್, ಸ್ವಚ್ಛ ಭಾರತ್, ವಿಕಸಿತ್ ಭಾರತ್' ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗುತ್ತಿರುವ ಸ್ವಚ್ಛತಾ ಹಿ ಸೇವಾ-2026 ಅಭಿಯಾನದ ಅಂಗವಾಗಿ ಇಲ್ಲಿಯ ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿ (ಎನ್ಎಸ್ಎಸ್ಒ- ಫೀಲ್ಡ್ ಆಪರೇಶನ್ ಡಿವಿಜನ್) ವತಿಯಿಂದ ನಗರದ ವಿವಿಧೆಡೆ ಸ್ವಚ್ಛತೆ ಹಾಗೂ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಯಿತು.
ನಗರದ ಸಿದ್ಧಾರೂಢ ಮಠದ ಪುಷ್ಕರಣಿ ಪ್ರದೇಶದಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆ ಕೈಗೊಳ್ಳಲಾಯಿತು. ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿಯ 50ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿ ಕೆರೆ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಕಚೇರಿಯ ಪ್ರಾದೇಶಿಕ ಮುಖ್ಯಸ್ಥ ಕೆ. ಹರೀಶ್ವರನ್, ಉಪನಿರ್ದೇಶಕ ಮಾದೇವಪ್ಪ ನೇತೃತ್ವ ವಹಿಸಿದ್ದರು.
ಆನಂದನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಚ್ಛತೆ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಯಿತು. 28 ವಿದ್ಯಾರ್ಥಿಗಳು ಭಾಗವಹಿಸಿ ಸ್ವಚ್ಛತೆ, ಸಾರ್ವಜನಿಕರ ಸಹಭಾಗಿತ್ವ ಹಾಗೂ ಸ್ವಚ್ಛ ಮತ್ತು ಸುಸ್ಥಿರ ಪರಿಸರದ ಮಹತ್ವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜಿನಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಕಚೇರಿಯ ಸಹಾಯಕ ನಿರ್ದೇಶಕ ಪ್ರಮೋದ್ ಪಂಡಿತ್, ಕೆ. ಹರೀಶ್ವರನ್, ಪ್ರಾಂಶುಪಾಲ ಅರವಿಂದ ಜೋಶಿ, ಪ್ರಾಧ್ಯಾಪಕ ಗುರುನಾಥ ಅವರು ಮಾತನಾಡಿದರು. ಸ್ವಚ್ಛತೆ, ವೈಯಕ್ತಿಕ ನೈರ್ಮಲ್ಯ, ಜವಾಬ್ದಾರಿಯುತ ನಾಗರಿಕರು ಹಾಗೂ ಅಭಿಯಾನದ ಉದ್ದೇಶಗಳನ್ನು ವಿವರಿಸಿದರು. ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರಕ್ತದಾನ ಶಿಬಿರ: ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನದ ಅಂಗವಾಗಿ ಎನ್ಎಸ್ಎಸ್ಒ ಪ್ರಾದೇಶಿಕ ಕಚೇರಿಯಲ್ಲಿ ಗುರುವಾರ ರಕ್ತದಾನ ಶಿಬಿರ ಆಯೋಜನೆ ಮಾಡಲಾಯಿತು. ಶಾ ಧಾಮಜಿ ಜಾಧವಜಿ ಛೇಡಾ ಮೆಮೋರಿಯಲ್ ರಾಷ್ಟ್ರೊತ್ಥಾನ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ನಡೆದ ಶಿಬಿರದಲ್ಲಿ 30ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ವೈದ್ಯಾಧಿಕಾರಿ ಎಸ್.ಎಸ್. ಸಂಗೊಳ್ಳಿ, ಎನ್ಎಸ್ಎಸ್ಒ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಕೆ. ಹರೀಶ್ವರನ್ ಮಾತನಾಡಿ, ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬಂದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದಿಸಿದರು.