city circles ಹುಬ್ಬಳ್ಳಿಯ ಹೊಸೂರ ಸರ್ಕಲ್.
- ಸಿಟಿ ಸೌಂದರ್ಯಕ್ಕೆ ಮೆರಗು ನೀಡುವ ಸರ್ಕಲ್ಗಳು
- ನಗರಾಭಿವೃದ್ಧಿ ಪ್ರಾಧಿಕಾರದಿಂದ ವೃತ್ತಗಳ ಅಭಿವೃದ್ಧಿ ಚಿಂತನೆ
- ಖಾಸಗಿ ಸಹಯೋಗ ಪಡೆಯಲೂ ಯೋಜನೆ
ಹುಬ್ಬಳ್ಳಿ: city circles ಯಾವುದೇ ಒಂದು ನಗರದ ಸರ್ಕಲ್ಗಳೆಲ್ಲ ಸುಂದರವಾಗಿದ್ದರೆ ಅಥವಾ ಅಲ್ಲಿ ಯಾವುದೇ ಅಡೆತಡೆ ಇಲ್ಲದೇ ವಾಹನ ಸಂಚಾರವಿದ್ದರೆ ಅದನ್ನು ಸುಂದರ, ಅಚ್ಚುಕಟ್ಟಾದ ನಗರ ಎನ್ನಬಹುದು. ಹೀಗಿದ್ದರೆ ಆ ನಗರದ ಅಂದವೂ ಹೆಚ್ಚುತ್ತದೆ. ಹೊಸಬರು ಯಾರೇ ಆ ಊರಿಗೆ ಬಂದರೂ ಸರ್ಕಲ್ ನೋಡಿದ ತಕ್ಷಣ ಅಬ್ಬಾ ಎಷ್ಟು ಚೆಂದ ಎಂದು ಉದ್ಘಾರ ತೆಗೆಯುತ್ತಾರೆ.
ಅಂದರೆ ಆಯಾ ಊರಿನ ಸರ್ಕಲ್ಗಳು ಹೇಗಿವೆ ಎಂಬುದರ ಮೇಲೆ ಆ ಊರಿನ ಅಂದ ಚೆಂದ ಅಡಗಿರುತ್ತದೆ ಎಂದೇ ಹೇಳಬಹುದು. ಮೈಸೂರಿಗೆ ಹೋದವರು ಇದು ಸುಂದರ ನಗರ ಎಂದು ಅಲ್ಲಿನ ಸರ್ಕಲ್ಗಳನ್ನು ನೋಡಿ ಹೇಳಿ ಬಿಡುವಷ್ಟರ ಮಟ್ಟಿಗೆ ಅಚ್ಚುಕಟ್ಟಾಗಿವೆ.
ಇದೀಗ ಹುಬ್ಬಳ್ಳಿ ಧಾರವಾಡ ಅವಳಿನಗರದ ಸರ್ಕಲ್ಗಳ ಅಭಿವೃದ್ಧಿಪಡಿಸಿ ಸೌಂದರ್ಯದ ಟಚ್ ಕೊಡುವ ಆಲೋಚನೆಯೊಂದು ನಮ್ಮೂರಲ್ಲೂ ಮೊಳಕೆಯೊಡೆದಿದೆ.
ಸುಂದರಗೊಳಿಸುವುದು ಹೇಗೆ
ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್, ವಿದ್ಯಾನಗರ ಕಾಡಸಿದ್ದೇಶ್ವರ ಕಾಲೇಜು, ವಾಣಿವಿಲಾಸ, ಅಂಬೇಡ್ಕರ್ ವೃತ್ತ, ಬಂಕಾಪುರ ಚೌಕ್, ಗಬ್ಬೂರ, ಇಂಡಿಪಂಪ್ ಸರ್ಕಲ್ ಹೀಗೆ ವಿವಿಧ ಸರ್ಕಲ್ಗಳನ್ನು ಅಭಿವೃದ್ಧಿ ಪಡಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ವೃತ್ತಗಳಲ್ಲಿ ಎಲ್ಲ ರಸ್ತೆಗಳಿಗೂ ಎಡಕ್ಕೆ ತಿರುವು ತೆಗೆದುಕೊಳ್ಳುವುದನ್ನು ಮುಕ್ತಗೊಳಿಸುವುದು, ವಾಹನ ಸಂಚಾರಕ್ಕೆ ಅಡೆತಡೆಗಳು ಕಡಿಮೆ ಮಾಡಿ ಸುಗಮಗೊಳಿಸುವುದು, ಲೈಟಿಂಗ್ ವ್ಯವಸ್ಥೆ, ಮಧ್ಯದಲ್ಲಿ ಸೌಂದರ್ಯೀಕರಣಕ್ಕೆ ಬೇಕಾದ ಸಲಕರಣೆಗಳನ್ನು ಅಳವಡಿಸುವುದು ಹೀಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶವನ್ನು ಪ್ರಾಧಿಕಾರ ಹೊಂದಿದೆ.
ಇದರ ಜತೆಗೆ ಖಾಸಗಿ ಸಹಭಾಗಿತ್ವದಲ್ಲಿ ಸಿಎಸ್ಆರ್ ನಿಧಿ ಅಡಿ ಸೌಂದರ್ಯೀಕರಣಕ್ಕೆ ಅವಕಾಶ ನೀಡುವ ಉದ್ದೇಶವೂ ಪ್ರಾಧಿಕಾರಕ್ಕೆ ಇದೆ.
20 ವೃತ್ತಗಳ ಪೈಕಿ ಮಹಾನಗರ ಪಾಲಿಕೆಯು 11 ಸರ್ಕಲ್ಗಳನ್ನು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಿದೆ. ಹುಡಾದಿಂದ ಉಳಿದ ಸರ್ಕಲ್ಗಳನ್ನು ಅಭಿವೃದ್ಧಿ ಪಡಿಸಲು ಅಂದಾಜು 10 ಕೋಟಿ ರೂ. ವ್ಯಯ ಮಾಡಲು ಪ್ರಾಧಿಕಾರ ಸಜ್ಜಾಗಿದೆ. ಈ ಬಗ್ಗೆ ಪರಿಕಲ್ಪನೆ ಯೋಜನೆ (ಕಾನ್ಸೆಪ್ಟ್ ಪ್ಲಾನ್) ತಯಾರಿಸಲು ವಾಸ್ತುಶಿಲ್ಪಿಗಳಿಗೆ ಕೋರಲಾಗಿದೆ.
ಖಾಸಗಿ ಸಹಭಾಗಿತ್ವದಲ್ಲಿ ಇಂತಹ ಯೋಜನೆಗಳನ್ನು ಕೈಗೊಳ್ಳುವುದರಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆಯೂ ಆಗುವುದಿಲ್ಲ. ಇದಕ್ಕೆ ಆಸಕ್ತಿ ವ್ಯಕ್ತಪಡಿಸುವ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಮುಂದಡಿ ಇಡಬಹುದು.
ಹುಬ್ಬಳ್ಳಿ ಧಾರವಾಡದ ಸುಮಾರು 20 ಸರ್ಕಲ್ಗಳ ಬ್ಯುಟಿಫಿಕೇಶನ್ಗೆ ಯೋಜನೆ ರೂಪಿಸುವಂತೆ ಮೂವರು ಆಕಿರ್ಟೆಕ್ಟ್ಗಳ ತಂಡಕ್ಕೆ ಮನವಿ ಮಾಡಲಾಗಿದೆ. ಸದ್ಯಕ್ಕೆ ಅವರಿಗೆ ಪರಿಕಲ್ಪನೆ ಯೋಜನೆ ನೀಡಲು ಹೇಳಲಾಗಿದ್ದು, ಅದನ್ನು ಮತ್ತೊಮ್ಮೆ ಹುಡಾ ಸಭೆಯಲ್ಲಿ ಚರ್ಚಿಸಿ ನಂತರದಲ್ಲಿ ಡಿಪಿಆರ್ ಸಿದ್ಧತೆಗೆ ಸೂಚಿಸಲಾಗುವುದು.
— ಶಾಕೀರ್ ಸನದಿ, ಹುಡಾ ಅಧ್ಯಕ್ಷ