ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ವಿವಸ್ತ್ರ ಪ್ರಕರಣದ ತನಿಖೆ ನಡೆಸಲು ಶನಿವಾರ ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ಅಧಿಕಾರಿಗಳು. 
ಧಾರವಾಡ

(cid)ವಿವಸ್ತ್ರ ಪ್ರಕರಣದ ತನಿಖೆಗೆ ಸಿಐಡಿ ಎಂಟ್ರಿ

ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ವಿವಸ್ತ್ರ ಹಾಗೂ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಇಲ್ಲಿಯ ಕೇಶ್ವಾಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರಾಜಕೀಯ ತಿರುವ ಪಡೆಯುತ್ತಿದ್ದಂತೆಯೇ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಸಿಐಡಿ (cid) ಅಧಿಕಾರಿಗಳು ಶನಿವಾರ ಎಂಟ್ರಿ ಕೊಟ್ಟಿದ್ದಾರೆ.
ಸಿಐಡಿ ವಿಶೇಷ ವಿಚಾರಣಾ ವಿಭಾಗದ ಎಸ್‌ಪಿ ಶಾಲೂ ನೇತೃತ್ವದ ತಂಡವು ನಗರಕ್ಕೆ ಆಗಮಿಸಿದ್ದು, ಈ ತಂಡದಲ್ಲಿ ಇಬ್ಬರು ಡಿವೈಎಸ್‌ಪಿ, ಇನ್‌ಸ್ಪೆಕ್ಟರ್ ಹಾಗೂ ಪಿಎಸ್‌ಐ ಸೇರಿ 8 ಜನರು ಇದ್ದಾರೆ.
ಹು-ಧಾ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ ತಂಡವು, ಹಿರಿಯ ಅಧಿಕಾರಿಗಳಿಂದ ಪ್ರಕರಣವನ್ನು ಹಸ್ತಾಂತರ ಮಾಡಿಕೊಂಡು ಫೀಲ್ಡ್‌ಗೆ ಇಳಿದಿದೆ. ಕೇಶಾಪುರ ಪೊಲೀಸ್ ಠಾಣೆ ಹಾಗೂ ಸಿಇಎನ್ ಕ್ರೈಂ ಠಾಣೆಗಳಿಗೆ ತೆರಳಿದ ತಂಡವು ತನಿಖಾಧಿಕಾರಿಗಳು ಸಂಗ್ರಹಿಸಿದ್ದ ಮಾಹಿತಿಯನ್ನು ಕಲೆ ಹಾಕಿದೆ.
ಜ. 2ರಿಂದ ಇಲ್ಲಿಯವರೆಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟಾರೆ ಆರು ಎಫ್‌ಐಆರ್ ದಾಖಲಾಗಿದೆ. ಎಲ್ಲ ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಸಿಐಡಿ ಅಧಿಕಾರಿಗಳು ದಾಖಲೆ ಮತ್ತು ಮಾಹಿತಿ ಸಂಗ್ರಹಿಸಿದ್ದಾರೆ.
ಏನಾಗಿತ್ತು?: ಜ. 5ರಂದು ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ಅವರನ್ನು ಬಂಧಿಸಿದ್ದ ಪೊಲೀಸರು, ಆಕೆಯನ್ನು ವಿವಸ್ತ್ರಗೊಳಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಇದನ್ನು ಪೊಲೀಸ್ ಅಧಿಕಾರಿಗಳು ಅಲ್ಲಗಳೆದಿದ್ದರು. ವಿವಸ್ತ್ರ ಪ್ರಕರಣ ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ದರು. ಹೋರಾಟ ತೀವ್ರಗೊಳ್ಳುವುದನ್ನು ಅರಿತ ರಾಜ್ಯ ಸರ್ಕಾರ, ಸಿಐಡಿ ತನಿಖೆ ನಡೆಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು, ಹುಬ್ಬಳ್ಳಿಗೆ ಆಗಮಿಸಿದ್ದು ಪ್ರಕರಣದ ಇಂಚಿಂಚು ಮಾಹಿತಿ ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ವರದಿ ಕೊಡಲು ಮುಂದಾಗಿದ್ದಾರೆ.