ಧಾರವಾಡ ಕುಮಾರೇಶ್ಬರ ನಗರದ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ದಲ್ಲಿ ಸಂಜಯ್ ಮಾಲಗತ್ತಿ ಮಾತನಾಡಿದರು.  
ಧಾರವಾಡ

ಭವಿಷ್ಯದ ಉನ್ನತ ಶಿಕ್ಷಣದ ದಾರಿ ಆಯ್ದುಕೊಳ್ಳಿ

ಜಗದೀಶ ಹೊಂಬಳಿ
ಧಾರವಾಡ: ಇಂದಿನ ಸಮಾಜದಲ್ಲಿನ ಬದಲಾವಣೆಗಳನ್ನು ಅರಿತು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಉನ್ನತ ಶಿಕ್ಷಣದ ದಾರಿ ಆಯ್ದುಕೊಳ್ಳಬೇಕು ಎಂದು ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಸಂಜಯಕುಮಾರ ಮಾಲಗತ್ತಿ ಹೇಳಿದರು.
ಕುಮಾರೇಶ್ವರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಪ್ರಸ್ತುತ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಂತಹ ವೃತ್ತಿಪರ ವಿಷಯದಲ್ಲಿ ಶಿಕ್ಷಣ ಪಡೆದರೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಹೊಂದಬಹುದು ಎಂದು ಸಲಹೆ ನೀಡಿದರು.
ಪ್ರೊ. ಚಂದುನವರ ಮಾತನಾಡಿ, ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಸಕಲ ಸೌಲಭ್ಯಗಳನ್ನು ಹೊಂದಿ ಖಾಸಗಿ ಕಾಲೇಜುಗಳನ್ನು ಮೀರಿಸುವಷ್ಟರ ಮಟ್ಟಿಗೆ ಬೆಳೆಯುತ್ತಿವೆ. ವಿದ್ಯಾರ್ಥಿಗಳು ಕಾಣುವ ಕನಸುಗಳು ದೊಡ್ಡದಾಗಿರಬೇಕು ಮತ್ತು ಅವುಗಳನ್ನು ನನಸಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಗುರುನಾಥ ಬಡಿಗೇರ ಮಾತನಾಡಿ, ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು ಅಂದಾಗ ಮಾತ್ರ ಅದು ನಿಮಗೆ ತೃಪ್ತಿ ಕೊಡುತ್ತದೆ ಎಂದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸರಸ್ವತಿ ಪಾಟೀಲ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಬಸವರಾಜೇಶ್ವರಿ ಪಾಟೀಲ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಮೌನೇಶ ಬಡಿಗೇರ ಹಾಗೂ ಪತ್ರಿಕೋದ್ಯಮ ವಿಭಾಗದ ಡಾ. ವಿಶ್ವನಾಥ ಚಿಂತಾಮಣಿ ಮಾತನಾಡಿದರು. ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ಐಕ್ಯೂಎಸಿ ಸಂಯೋಜಕ ಇಬ್ರಾಹಿಂ ಸೌದಾಘರ ಹಾಜರಿದ್ದರು. ಇದೇ ವೇಳೆ ಅಂತಿಮ ವರ್ಷದ ವಿದ್ಯಾರ್ಥಿಗಳು ತಾವು ವಿದ್ಯಾರ್ಜನೆಗೈದ ಮಹಾವಿದ್ಯಾಲಯಕ್ಕೆ ಕಿರು ಕಾಣಿಕೆ ಸಮರ್ಪಿಸಿದರು. ಉದ್ದಮ್ಮ ಅಂಜನಕಟ್ಟಿ ನೀರೂಪಿಸಿದರು. ಪವಿತ್ರಾ ಮಾಲಾಪೂರ ಸ್ವಾಗತಿಸಿದರು. ನೀಲಮ್ಮ ಸಬರದ ವಂದಿಸಿದರು.