chilly sale ಹುಬ್ಬಳ್ಳಿ ಎಪಿಎಂಸಿಗೆ ಶನಿವಾರ ಆವಕವಾದ ಕೆಂಪು ಮೆಣಸಿನಕಾಯಿ. 
ಧಾರವಾಡ

chilly sale ಮೆಣಸಿನಕಾಯಿ ಭರ್ಜರಿ ವ್ಯಾಪಾರ

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ಖುಷಿ ತಂದ ದರ, ಎಪಿಎಂಸಿಗೆ ಆವಕ ಹೆಚ್ಚಳ
ನಗರದ ಎಪಿಎಂಸಿಗೆ ಒಣ ಮೆಣಸಿನಕಾಯಿ ಆವಕದಲ್ಲಿ ಹೆಚ್ಚಳ ಕಂಡು ಬಂದಿದೆ. ಧಾರವಾಡ ಜಿಲ್ಲೆ ಮಾತ್ರವಲ್ಲ, ಅಕ್ಕಪಕ್ಕದ ಅನೇಕ ಜಿಲ್ಲೆಗಳಿಂದ ಕೆಂಪು ಮೆಣಸಿನಕಾಯಿ ಲಗ್ಗೆ ಇಡುತ್ತಿದೆ.
ಶನಿವಾರದ ಟೆಂಡರ್​ಗೆ ಸುಮಾರು 10 ಸಾವಿರ ಚೀಲಗಳು ಮೆಣಸಿನಕಾಯಿ ಆವಕವಾಗಿದೆ. ಇದರಿಂದ ಎಪಿಎಂಸಿಯ ಬಹುತೇಕ ರಸ್ತೆಗಳಲ್ಲಿ ಎಲ್ಲೆಡೆ ಮೆಣಸಿನಕಾಯಿ ಘಾಟು ಆವರಿಸಿತ್ತು. ಬ್ಯಾಡಗಿ ಡಬ್ಬಿ ತಳಿಯ ಮೆಣಸಿನಕಾಯಿ ಪ್ರತಿ ಕ್ವಿಂಟಾಲ್​ಗೆ 65999 ರೂ. ದರ ನಿಗದಿಯಾದರೆ, ಕಡ್ಡಿ ತಳಿಯು ಪ್ರತಿ ಕ್ವಿಂಟಾಲ್​ಗೆ 51199 ರೂ. ಟೆಂಡರ್​ನಲ್ಲಿ ದರ ಸಿಕ್ಕಿದೆ.
ಪ್ರಕೃತಿ ವಿಕೋಪದಿಂದ ಮುಂಗಾರು ಕೈಕೊಟ್ಟರೂ ನಂತರದಲ್ಲಿ ಬೆಳೆದ ಕೆಂಪು ಮೆಣಸಿನಕಾಯಿ ರೈತರ ಕೈ ಹಿಡಿಯುತ್ತಿದೆ. ಕಳೆದೊಂದು ವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ತರುತ್ತಿದ್ದಾರೆ. ವಾರದಲ್ಲಿ ಮೂರು ದಿನ ಮಾತ್ರ ಹುಬ್ಬಳ್ಳಿ ಎಪಿಎಂಸಿಯಲ್ಲಿ ಟೆಂಡರ್​ ನಡೆಯುತ್ತದೆ. ಸೋಮವಾರ, ಗುರುವಾರ ಹಾಗೂ ಶನಿವಾರ ದೊಡ್ಡ ಮಟ್ಟದಲ್ಲಿ ವ್ಯಾಪಾರ ಮಾಡಲಾಗುತ್ತದೆ.
ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ ಮುಂತಾದ ಜಿಲ್ಲೆಗಳಿಂದಲೂ ಕೆಂಪು ಮೆಣಸಿನಕಾಯಿ ಇಲ್ಲಿಗೆ ಬರುತ್ತಿದೆ. ವಿಶೇಷವಾಗಿ ಆಂಧ್ರದ ಗುಂಟೂರು ಕಾಯಿ ಸಹ ಬರುತ್ತಿದೆ. ಧಾರವಾಡ ಜಿಲ್ಲೆಯ ಕುಂದಗೋಳ, ಹುಬ್ಬಳ್ಳಿ, ಕಲಟಗಿ, ನವಲಗುಂದ ತಾಲೂಕುಗಳಿಂದ ಸ್ಥಳಿಯ ಕಾಯಿ ಬರುತ್ತಿದೆ. ಕುಂದಗೋಳದಲ್ಲಿ ವಿಶೇಷವಾಗಿ ಬ್ಯಾಡಗಿ ತಳಿಯ ಮೆಣಸಿನಕಾಯಿ ಬೆಳೆಯಲಾಗುತ್ತದೆ.
ಅತಿವೃಷ್ಟಿಯಿಂದ ಫಸಲು ಉತ್ತಮವಾಗಿರಲಿಲ್ಲ. ಹಾಗಾಗಿ, ಈ ವರ್ಷ ಎಪಿಎಂಸಿಯಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತಿರಲಿಲ್ಲ. ಆದರೆ, ಶನಿವಾರ ಕೆಂಪು ಮೆಣಸಿನಕಾಯಿ ಘಾಟು ಎಲ್ಲೆಡೆ ಹರಡಿತ್ತು. ಬಹುತೇಕ ಎಲ್ಲ ದಲಾಲಿ ಅಂಗಡಿಗಳ ಮುಂದೆ ದೊಡ್ಡ ಪ್ರಮಾಣದಲ್ಲಿ ಟೆಂಡರ್​ಗೆ ಇಡಲಾಗಿತ್ತು. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ವಹಿವಾಟು ನಿರೀಸಲಾಗಿದೆ.