ಹುಬ್ಬಳ್ಳಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಒಣ ಮೆಣಸಿನಕಾಯಿ (chillies)ಮೇಳಕ್ಕೆ ಆಗಮಿಸಿದ್ದ ಮೆಣಸಿನಕಾಯಿಯನ್ನು ಶಾಸಕರಾದ ಎಂ.ಆರ್. ಪಾಟೀಲ, ಎನ್.ಎಚ್. ಕೋನರಡ್ಡಿ ವೀಕ್ಷಿಸಿದರು. 
ಧಾರವಾಡ

(chillies) ಮೆಣಸಿನಕಾಯಿಗೆ ಮಾರುಕಟ್ಟೆ ಅಗತ್ಯ

ಮರಿದೇವ ಹೂಗಾರ
ಹುಬ್ಬಳ್ಳಿ: ಕುಂದಗೋಳ, ಅಣ್ಣಿಗೇರಿ ಹಾಗೂ ನವಲಗುಂದ ಸೇರಿ ಇತರೆಡೆ ಬೆಳೆಯುವ ಮೆಣಸಿನಕಾಯಿಗೆ (chillies) ಮಾರುಕಟ್ಟೆಯ ಅಗತ್ಯವಿದೆ ಎಂದು ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಅಭಿಪ್ರಾಯಪಟ್ಟರು.
ಇಲ್ಲಿಯ ಮೂರುಸಾವಿರ ಮಠದ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ 14ನೇ ಒಣ ಮೆಣಸಿನಕಾಯಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ವಾಣಿಜ್ಯ ಬೆಳೆಯಾದ ಮೆಣಸಿನಕಾಯಿ ಬೆಳೆಯುವಂತೆ ರೈತರಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಬ್ಯಾಡಗಿ ಮೆಣಸಿನಕಾಯಿ ಕುರಿತು ಹೆಚ್ಚಿನ ಪ್ರಚಾರ ಮಾಡಬೇಕು. ಹೊಸ ತಳಿಗಳ ಬಗ್ಗೆಯೂ ರೈತರಿಗೆ ಅರಿವು ಮೂಡಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಂಬಾರು ಪದಾರ್ಥ ಮಂಡಳಿಯಿಂದ ಸಿಗುವ ಸವಲತ್ತು ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.
ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ರೈತರು ಹೊಸ ತಳಿಯ ಬೆಳೆಗಳನ್ನು ಬೆಳೆಯಬೇಕು. ಬ್ಯಾಡಗಿ ಮೆಣಸಿನಕಾಯಿ ತಳಿಯನ್ನು ನವಲಗುಂದ, ನರಗುಂದ, ಗದಗ, ಕುಂದಗೋಳ, ಬಾಗಲಕೋಟ ಸೇರಿ ವಿವಿಧೆಡೆ ಬೆಳೆಯಲಾಗುತ್ತದೆ. ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ಹೊಸ ತಳಿಯ ಬೆಳೆಗಳನ್ನು ಸಂಶೋಧಿಸಿದ್ದಾರೆ. ಹೊಸ ತಳಿಗಳು ರೈತರಿಗೆ ತಲುಪಬೇಕು. ಅಡುಗೆಗಳಲ್ಲಿ ಕೆಂಪು ಖಾರವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಕೆಂಪು ಖಾರದ ಬಳಕೆಯಿಂದ ರೋಗಗಳು ಬರುವುದಿಲ್ಲ. ಬೆಂಗಳೂರು, ಮುಂಬೈನಂತಹ ನಗರಗಳಲ್ಲಿ ಸಹ ಕೆಂಪು ಖಾರವನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಗಿರೀಶ, ಪ್ರಧಾನ ವ್ಯವಸ್ಥಾಪಕ ಡಾ. ರಾಮಚಂದ್ರ ಮಡಿವಾಳ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಅಜಿತಕುಮಾರ ಮಶಾಲ್ಡಿ, ಯೋಗೇಶ ಕಿಲಾರಿ, ಉಮೇಶ ಹೆಬಸೂರ, ಮಾಲತೇಶ ಶ್ಯಾಗೋಟಿ ಇತರರು ಇದ್ದರು.