ಉಪ್ಪಿನಬೆಟಗೇರಿ ಗ್ರಾಮದ ಶ್ರೀ ವಿರೂಪಾಕ್ಷೇಶ್ವರ ಜಾತ್ರೆಯ ಮೂರನೇ ದಿನದ ಪ್ರವಚನದಲ್ಲಿ ಪಾಲ್ಗೊಂಡಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರನ್ನು ಕುಮಾರ ವಿರೂಪಾಕ್ಷ ಸ್ವಾಮೀಜಿ ಸನ್ಮಾನಿಸಿದರು. ಸಂಗಮೇಶ ದೇವರು, ಸುರೇಶ ಹಿರೇಮಠ, ನಾಗರಾಜ ಬಡ್ಡೂರ ಇತರರಿದ್ದರು.
- ಲವಣಗಿರಿ ಉತ್ಸವದಲ್ಲಿ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸಲಹೆ
ಉಪ್ಪಿನಬೆಟಗೇರಿ: ವಿದ್ಯಾರ್ಥಿಗಳಿಗೆ ಅನೇಕ ಮಠ ಮಾನ್ಯಗಳು ಜ್ಞಾನ ದಾಸೋಹದ ಜತೆಗೆ ಅನ್ನ ದಾಸೋಹವನ್ನು ನೀಡುತ್ತಿವೆ. ಮಕ್ಕಳು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.
ಗ್ರಾಮದ ಶ್ರೀ ಗುರು ವಿರೂಪಾಕ್ಷೇಶ್ವರ ಜಾತ್ರೆ ಅಂಗವಾಗಿ ಜರುಗುತ್ತಿರುವ ಲವಣಗಿರಿ ಉತ್ಸವದಲ್ಲಿ ಭಾನುವಾರ ಅವರು ಮಾತನಾಡಿದರು. ಮಠಗಳು ನಮ್ಮ ಪೂರ್ವಜರ ಕಾಲದಿಂದಲೂ ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆಗೆ ಸದಾ ಟೊಂಕ ಕಟ್ಟಿ ನಿಂತಿವೆ. ಪಾಲಕರು ಮಕ್ಕಳಿಗೆ ಎಲ್ಲಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಲು ಅವಕಾಶ ಕೊಡಬೇಕು. ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯುವುದು ಬಹಳ ಕಷ್ಟದ ಕೆಲಸವಾಗಿತ್ತು. ಈಗ ಶರಣರ ಮಾರ್ಗದರ್ಶನದಲ್ಲಿ ಅನೇಕರು ಪಾಂಡಿತ್ಯವನ್ನು ಹೊಂದಿದ್ದಾರೆ. ಹಾಗೆಯೇ ಶ್ರೀಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಡೆದು ಮುಂದೆ ಇದೇ ಲವಣಗಿರಿ ಉತ್ಸವದಲ್ಲಿ ಅವರು ದೊಡ್ಡ ಅಧಿಕಾರಿಗಳಾಗಿ ಪಾಲ್ಗೊಳ್ಳುವಂತಾಗಬೇಕು ಎಂದರು.
ಇದೇ ವೇಳೆ ಆಯುಕ್ತ ಎನ್. ಶಶಿಕುಮಾರ ಅವರು ಪವಮಾನ ಹಾಗೂ ಪುತ್ತೂರು ನರಸಿಂಹ ನಾಯಕ ಅವರ ಏಸುಕಾಯಂಗಳ ಕಳೆದು ಎಂಬ ಭಕ್ತಿ ಗೀತೆಗಳನ್ನು ಹಾಡಿ ಭಕ್ತರನ್ನು ರಂಜಿಸಿದರು.
ಶ್ರೀಮಠದ ಪೀಠಾಧ್ಯಕ್ಷರಾದ ಕುಮಾರ ವಿರೂಪಾಕ್ಷ ಸ್ವಾಮೀಜಿಗಳು ಎನ್. ಶಶಿಕುಮಾರ ಅವರನ್ನು ಗೌರವಿಸಿದರು. ನಂತರ ಶ್ರೀ ವೀರೇಶ್ವರ ಶಾಸ್ತ್ರಿಗಳಿಂದ ಶಿವಶರಣೆ ಅಕ್ಕಮಹಾದೇವಿ ಕುರಿತ ಪ್ರವಚನ ಜರುಗಿತು. ಚಿಕ್ಕಲಪರ್ವಿಯ ರುದ್ರಮುನೇಶ್ವರ ಮಠದ ಸದಾಶಿವ ಸ್ವಾಮೀಜಿ, ನರೇಂದ್ರ ಮಳೆಪ್ಪಜ್ಜನ ಮಠದ ಶ್ರೀ ಸಂಗಮೇಶ್ವರ ಅಜ್ಜನವರು, ಹಾಲವಿಯ ನಿರುಪಾದಿ ದೇವರು, ಕೃಷಿ ವಿಜ್ಞಾನಿ ನಾಗರಾಜ ಬಡ್ಡೂರ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಹಿರೇಮಠ, ಕಲ್ಲಯ್ಯ ವಿಭೂತಿಮಠ ಸೇರಿದಂತೆ ಯಾದವಾಡ, ಲಕಮಾಪೂರ, ಮುಳಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
ಅಯ್ಯಚಾರ, ಶಿವದೀಕ್ಷೆ 20ರಂದು
ಉಪ್ಪಿನಬೆಟಗೇರಿ: ಗ್ರಾಮದ ಶ್ರೀಗುರು ವಿರೂಪಾಕ್ಷೇಶ್ವರ ಜಾತ್ರೆ ಅಂಗವಾಗಿ ಮಾ. 20ರಂದು ದೇವಸ್ಥಾನದ ಕರ್ತುೃ ಗದ್ದುಗೆ ಬಳಿ ಸ್ಥಳೀಯ ಭಕ್ತರಾದ ಸಂಕಣ್ಣವರ ಹಾಗೂ ಬರಬರಿ ಬಂಧುಗಳು ಏರ್ಪಡಿಸಿರುವ ಜಂಗಮ ವಟುಗಳಿಗೆ ಅಯ್ಯಚಾರ ಹಾಗೂ ಶಿವದೀಕ್ಷೆ ಕಾರ್ಯಕ್ರಮ ಆಯೋಜಿಸಲಾಗಿದೆ. ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಹಿರೇಮಠದ ಶ್ರೀ ಜಡೆಸಿದ್ಧೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸುವರು. ಆಸಕ್ತರು ಮಾ. 19ರೊಳಗೆ ಗ್ರಾಮದ ಮೂರುಸಾವಿರ ವಿರಕ್ತಮಠದಲ್ಲಿ ಹೆಸರು ನೋಂದಾಯಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.