ಧಾರವಾಡ: ಶರಣ ಸಂಸ್ಕೃತಿಯ ಪಾವನತಾಣ ಮುರಘಾಮಠದಲ್ಲಿ ಶ್ರೀ ಮುರಘೇಂದ್ರ ಮಹಾಶಿವಯೋಗಿಗಳ 96ನೇ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.
ಭಕ್ತರ ಹರ್ಷೋದ್ಘಾರದೊಂದಿಗೆ ಶ್ರೀಮಠದಿಂದ ಹೊರಟ ರಥವು, ಸವದತ್ತಿ ಮುಖ್ಯ ರಸ್ತೆ ಮಾರ್ಗವಾಗಿ ಹಾವೇರಿಪೇಟ ಡಿಪೋ ವರ್ತುಳದವರೆಗೆ ತೆರಳಿ, ಮರಳಿ ಶ್ರೀಮಠಕ್ಕೆ ಆಗಮಿಸಿತು. ಮಾರ್ಗದುದ್ದಕ್ಕೂ ಭಜನಾ ತಂಡ, ಜಗ್ಗಲಗಿ, ಹೆಜ್ಜೆಮೇಳ, ಜಾಂಝ್, ಕಲಾ ತಂಡಗಳು ಭಾಗವಹಿಸಿ, ಜಾತ್ರೆಗೆ ಮೆರಗು ನೀಡಿದವು. ರಸ್ತೆ ಪಕ್ಕದಲ್ಲಿ ನೆರೆದಿದ್ದ ಅಸಂಖ್ಯಾತ ಭಕ್ತರು ಜೈ ಮುರಘೇಶ ಜೈ ಬಸವೇಶ ಎಂದು ಘೋಷಣೆ ಕೂಗಿ ರಥೋತ್ಸವಕ್ಕೆ ಉತ್ತತ್ತಿ, ಬಾಳೆಹಣ್ಣು, ಕಿತ್ತಳೆ ಹಣ್ಣು ಸಮರ್ಪಿಸಿ ಭಕ್ತಿ ಪರಾಕಾಷ್ಠೆ ಮೆರೆದರು.
ಶ್ರೀಮಠದ ಪೀಠಾಧ್ಯಕ್ಷ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ರಥಕ್ಕೆ ಚಾಲನೆ ನೀಡಲಾಯಿತು. ನಾಡಿನ ವಿವಿಧ ಮಠಾಧಿಶರು, ಹರಗುರು ಚರಮೂರ್ತಿಗಳು, ಸಾಧಕರು, ಆಡಳಿತ ಮಂಡಳಿ ಪದಾಽಕಾರಿಗಳು ಹಾಗೂ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಹಾಗೂ ವನ್ಯ ಜೀವಿ ಮಂಡಳಿ ಸದಸ್ಯೆ ವೈಶಾಲಿ ಕುಲಕರ್ಣಿ ಇದ್ದರು. ಇದಕ್ಕೂ ಮುನ್ನ ಬೆಳಗ್ಗೆ ನೂರಾರು ಮಕ್ಕಳಿಗೆ ಲಿಂಗದೀಕ್ಷೆ ಕಾರ್ಯಕ್ರಮ ಜರುಗಿತು.