ಜಾಮೀನು ಮೇಲೆ ಹೊರಗಡೆ ಹೋಗಿ (channappa sangolli) 19 ವರ್ಷದಿಂದ ತಲೆಮರೆಸಿಕೊಂಡಿದ್ದ ಚನ್ನಪ್ಪ
ಹುಬ್ಬಳ್ಳಿ: ಪತ್ನಿಗೆ ಕಿರುಕುಳ ನೀಡಿದ್ದ ಪ್ರಕರಣದಡಿ ಬಂಧಿತನಾಗಿ ಜಾಮೀನು ಮೇಲೆ ಹೊರಗಡೆ ಹೋಗಿ 19 ವರ್ಷದಿಂದ ತಲೆಮರೆಸಿಕೊಂಡಿದ್ದವನನ್ನು(channappa sangolli) ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಹೆಬಸೂರು ಗ್ರಾಮದ ಚನ್ನಪ್ಪ ರೇವಣಪ್ಪ ಸಂಗೊಳ್ಳಿ ಬಂಧಿತ. ಈತನ ವಿರುದ್ಧ 2007ರಲ್ಲಿ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿತ್ತು. ಆಗ ಚನ್ನಪ್ಪನನ್ನು ಬಂಧಿಸಲಾಗಿತ್ತು. ನ್ಯಾಯಾಲಯದಿಂದ ಜಾಮೀನು ಪಡೆದು ಮುದ್ದತು ದಿನಾಂಕದಂದು ಹಾಜರಾಗದೆ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಲಾಂಗ್ ಪೆಂಡಿಂಗ್ ಪ್ರಕರಣವೆಂದು ಪರಿಗಣಿಸಿ ಚನ್ನಪ್ಪನ ಮೇಲೆ ಓಪನ್ ವಾರಂಟ್ ಹೊರಡಿಸಿತ್ತು. ಪತ್ತೆಗೆ ಬೆನ್ನು ಬಿದ್ದ ಪಿಐ ಮುರುಗೇಶ ಚನ್ನಣ್ಣವರ, ಎಎಸ್‌ಐ ಎಲ್.ಎ. ಪಾಠಕ, ಸಿಎಚ್‌ಸಿ ಎಸ್.ಎ. ಹುಡೇದ ತಂಡ ಚನ್ನಪ್ಪನ ಸಂಬಂಧಿಕರ ಮೊಬೈಲ್ ನಂಬರ್ ಪಡೆದಿತ್ತು. ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಸಂಚರಿಸಿದ ತಂಡ ಕೊನೆಗೆ ಕುರ್ತಕೋಟಿಯಲ್ಲಿ ಚನ್ನಪ್ಪನನ್ನು ಬಂಧಿಸಿದೆ. ಇದಕ್ಕೆ ತಾಂತ್ರಿಕ ಸಿಬ್ಬಂದಿ ವಿಠ್ಠಲ ಡಂಗನವರ ಸಹಕರಿಸಿದ್ದರು.