ಹುಬ್ಬಳ್ಳಿಯಲ್ಲಿ ಛಬ್ಬಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಜಾತ್ರಾ ಸಮಿತಿ ಮುಖ್ಯಸ್ಥ ದೇವೇಂದ್ರಪ್ಪ ಕಾಗೇನವರ ಮಾತನಾಡಿದರು. ಕಲ್ಲಪ್ಪ ಮೊರಬದ, ಕರೆಪ್ಪ ಕೋಳಿ, ಗುರುನಾಥ ದೊಡ್ಡಮನಿ, ಬಸವರಾಜ ಅಂಬಲೆನ್ನವರ ಇದ್ದರು.
ಹುಬ್ಬಳ್ಳಿ: ತಾಲೂಕಿನ ಛಬ್ಬಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಳಿಸಿದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಮಾ. 16ರಿಂದ 18ರವರೆಗೆ ಶ್ರೀ ದುರ್ಗಾದೇವಿ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಜಾತ್ರಾ ಸಮಿತಿ ಮುಖ್ಯಸ್ಥ ದೇವೇಂದ್ರಪ್ಪ ಕಾಗೇನವರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
16ರಂದು ಮಧ್ಯಾಹ್ನ 12ಕ್ಕೆ ಗ್ರಾಮದ ಚೌತಮನೆ ಕಟ್ಟೆಯಲ್ಲಿ ಶ್ರೀ ದುರ್ಗಾ ದೇವಿ ಮೂರ್ತಿಗೆ ಸಕಲ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಲಾಗುವುದು. ನಂತರ ವರೂರಿನ ನವಗ್ರಹತೀರ್ಥ ಕ್ಷೇತ್ರದ ಧರ್ಮಸೇನ ಭಟ್ಟಾರಕ ಮಹಾಸ್ವಾಮೀಜಿ ಅವರು ಮೂರ್ತಿ ಮೆರವಣಿಗೆಗೆ ಚಾಲನೆ ನೀಡುವರು. ಸಂಜೆ ದೇವಸ್ಥಾನದಲ್ಲಿ ಮೂರ್ತಿಗೆ ಪುಣ್ಯಾಹ ವಾಚನ ಹಾಗೂ ದೇವತಾ ಕಾರ್ಯಗಳು ನೆರವೇರಿಸಲಾಗುವುದು. 17ರಂದು ಬೆಳಗಿನ ಜಾವ ಶಿರಹಟ್ಟಿ ಸಂಸ್ಥಾನಮಠದ ಶ್ರೀ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮೀಜಿ ಅವರಿಂದ ಶ್ರೀ ದುರ್ಗಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಬಳಿಕ ಹೋಮ, ಹವನ, ಹೊಸ ಪಾಲಕಿ ಅರ್ಪಣೆ, ಕಳಸಾರೋಹಣ ನಡೆಯಲಿದೆ. ಸಂಜೆ 6ಕ್ಕೆ ಕುಂದಗೋಳ ಕಲ್ಯಾಣಪುರಮಠದ ಶ್ರೀ ಬಸವಣ್ಣಜ್ಜನವರು, ಹಂಪಿಯ ಶ್ರೀ ಪೂರ್ಣಾನಂದ ಸ್ವಾಮೀಜಿಗಳಿಂದ ಪ್ರವಚನ ನಡೆಯಲಿದೆ. ಛಬ್ಬಿಯ ಮೌನತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಉಪಸ್ಥಿತರಿರುವರು. 18ರಂದು ಬೆಳಗ್ಗೆ 6ರಿಂದ ದೇವಿಗೆ ಸುಮಂಗಲಿಯರಿಂದ ನಿರಂತರ ಉಡಿ ತುಂಬುವ ಕಾರ್ಯಕ್ರಮ. ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ. ರಾತ್ರಿ 9ರಿಂದ ಮರುದಿನ ಬೆಳಗಿನ ಜಾವ 6ರವರೆಗೆ ಚೌಡಕಿಪದ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿದೆ ಎಂದರು. ಕಲ್ಲಪ್ಪ ಮೊರಬದ, ಕರೆಪ್ಪ ಕೋಳಿ, ಗುರುನಾಥ ದೊಡ್ಡಮನಿ, ಬಸವರಾಜ ಅಂಬಲೆನ್ನವರ ಇದ್ದರು.