ನವಲಗುಂದ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷ ಬಂಡು ಕುಲಕರ್ಣಿ ಆಯ್ಕೆ ಪ್ರಮಾಣ ವಿತರಿಸಿದರು. ರಾಜು ವಿಜಾಪೂರ, ಹೆಮರಡ್ಡಿ ಸೈದಾಪುರ ಇತರರಿದ್ದರು.
ನವಲಗುಂದ: ಪತ್ರಕರ್ತರು ಸಾಮಾಜಿಕ ಕಾಳಜಿಯೊಂದಿಗೆ ಜವಾಬ್ದಾರಿ ನಿಭಾಯಿಸುವುದು ಅಗತ್ಯ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಹೇಳಿದರು.
ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ತಾಲೂಕು ಸಂಘಕ್ಕೆ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಪತ್ರಕರ್ತ ವೃತ್ತಿಗೆ ಗೌರವ ಸ್ಥಾನವಿದೆ. ಯಾವುದೇ ಆಮಿಷಗಳಿಗೆ ಬಲಿಯಾಗದೆ ನಿಷ್ಠುರತೆಯಿಂದ ವರದಿ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ರಾಜು ವಿಜಾಪೂರ ಮಾತನಾಡಿ, ಇಂದಿನ ದಿನಮಾನಗಳಲ್ಲಿ ನಕಲಿ ಪತ್ರಕರ್ತರ ಹಾವಳಿಯಿಂದಾಗಿ ನೈಜ ಪತ್ರಕರ್ತರು ಮುಜುಗುರಕ್ಕೊಳಗಾಗುವ ಪರಿಸ್ಥಿತಿ ಬಂದೊದಗಿದೆ. ಇವೆಲ್ಲವನ್ನು ಮೀರಿ ವೃತ್ತಿ ಘನತೆ ಕಾಪಾಡಿಕೊಳ್ಳುವ ಮೂಲಕ ನಕಲಿ ಪತ್ರಕರ್ತರ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಶೋಷಣೆಗೊಳಪಡಿಸುತ್ತಿರುವವರ ವಿರುದ್ಧ ಕ್ರಮ ಜರುಗಿಸಲು ಮುಂದಾಗಬೇಕಾಗಿದೆ ಎಂದರು..
ಇದೇ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಇಸ್ಮಾಯಿಲ್ ನದಾಫ, ಕಾರ್ಯದರ್ಶಿ ಈಶ್ವರ ಲಕ್ಕುಂಡಿ ಹಾಗೂ ಖಜಾಂಚಿ ಶಂಕರ ಸುಬೇದಾರಮಠ ಅವರಿಗೆ ಜಿಲ್ಲಾಧ್ಯಕ್ಷ ಬಂಡು ಕುಲಕರ್ಣಿ ಪ್ರಮಾಣ ಪತ್ರ ವಿತರಿಸಿದರು. ಹಿರಿಯ ಪತ್ರಕರ್ತ ಹುಚ್ಚಪ್ಪ ಭೋವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಮರಡ್ಡಿ ಸೈದಾಪೂರ, ಮಹೇಶ ನರೆಗಲ್, ಚಂದ್ರು ಕೊಟಗಿ, ಪುಂಡಲೀಕ ಮುಧೋಳೆ, ಬಾಬಾಜಾನ ಶಿರಕೋಳ, ಮೆಹಬೂಬ ಅಣ್ಣಿಗೇರಿ, ಸಂಜು ಗುರಿಕಾರ, ಸಮಿರ ಇಂಜಿನಿಯರ್, ಗಂಗಾಧರ ಕತ್ತಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಶ್ರೀಕಾಂತ ಮನ್ವಾಚಾರ್ಯ ಸ್ವಾಗತಿಸಿ, ವಂದಿಸಿದರು.