ಹುಬ್ಬಳ್ಳಿಯಲ್ಲಿ ನಂಜಪ್ಪ ಆಸ್ಪತ್ರೆಯ ಹಿರಿಯ ಮೆಡಿಕಲ್​ ಆಂಕೊಲಾಜಿಸ್ಟ್​ ಡಾ. ಪ್ರಸಾದ ಗುನಾರಿ ಮಾತನಾಡಿದರು. ಡಾ. ವಿನಾಯಕ ಚವ್ಹಾಣ, ಪ್ರಶಾಂತ ಕುರುಬೇಟ್​ ಇದ್ದರು. 
ಧಾರವಾಡ

ಕ್ಯಾನ್ಸರ್​ ಕಾಯಿಲೆ ಗೆದ್ದವರ ಸಂಭ್ರಮ

ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು ಭಾಗಿ

ಹುಬ್ಬಳ್ಳಿ: ಶಿವಮೊಗ್ಗದಲ್ಲಿ ಮೂರು ದಶಕದಿಂದ ಆರೋಗ್ಯ ಸೇವೆ ನೀಡುತ್ತಿರುವ ನಂಜಪ್ಪ ಆಸ್ಪತ್ರೆಯು ಕೆಲ ವರ್ಷದಿಂದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು, ಮೂರು ತಿಂಗಳಲ್ಲಿ ಹೊಸ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಆಸ್ಪತ್ರೆಯ ಹಿರಿಯ ಮೆಡಿಕಲ್​ ಆಂಕೊಲಾಜಿಸ್ಟ್​ ಡಾ. ಪ್ರಸಾದ ಗುನಾರಿ ತಿಳಿಸಿದರು.

ನಗರದ ಡೆನಿಸನ್ಸ್​ ಹೋಟೆಲ್​ನಲ್ಲಿ ಶುಕ್ರವಾರ ಕ್ಯಾನ್ಸರ್​ ಕಾಯಿಲೆಯಿಂದ ಗುಣಮುಖರಾಗಿ ಸಾಮಾನ್ಯ ಜೀವನ ನಡೆಸುತ್ತಿರುವ ಜನರ ಪರಸ್ಪರ ಸಂವಾದ ಹಾಗೂ ಹಿರಿಯ ವೈದ್ಯರ ಮಾರ್ಗದರ್ಶನ ಕಾರ್ಯಕ್ರಮದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ ಮೂರು ವರ್ಷದಿಂದ ನಂಜಪ್ಪ ಆಸ್ಪತ್ರೆ ಹುಬ್ಬಳ್ಳಿಯಲ್ಲಿಯೂ ಸೇವೆ ನೀಡುತ್ತಿದೆ. ಇದೀಗ 180 ಬೆಡ್​ನ ಹೊಸ ಆಸ್ಪತ್ರೆ ನಿರ್ಮಾಣವಾಗಿದ್ದು, ಇದು ಕ್ಯಾನ್ಸರ್​ ಸೇರಿ ಸಮಗ್ರ ಚಿಕಿತ್ಸೆಯ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯಾಗಲಿದೆ ಎಂದರು.

ಕ್ಯಾನ್ಸರ್​ ಮಾತ್ರವಲ್ಲ ಎಲ್ಲ ಕಾಯಿಲೆಗಳಿಗೆ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಲ್ಯಾಬೋರೆಟರಿ ಸೇರಿ ಸಕಲ ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸಲಾಗುತ್ತಿದೆ. ರೋಗಿಯೊಬ್ಬರು ಆಸ್ಪತ್ರೆಗೆ ಬಂದರೆ ಅವರಿಗೆ ಎಲ್ಲ ರೀತಿಯ ವೈದ್ಯಕಿಯ ಸೇವೆ ಲಭ್ಯವಾಗಬೇಕು ಎಂಬ ಉದ್ದೇಶ ಹೊಂದಲಾಗಿದೆ. ಕ್ಯಾನ್ಸರ್​ ಚಿಕಿತ್ಸೆ ನಂತರ ಆರೋಗ್ಯ ರಕ್ಷಣೆ, ಪೌಷ್ಟಿಕ ಆಹಾರ ಸೇವನೆ, ಜೀವನ ಶೈಲಿ ಮಾನಸಿಕ ಮನೋಬಲ ಇದ್ದರೆ ರೋಗ ಗೆಲ್ಲಬಹುದು ಎಂದರು.

ಕ್ಯಾನ್ಸರ್​ ಎಂದರೆ ಭಯ ಪಡುವ ಅಗತ್ಯ ಇಲ್ಲ. ಇದು ಚಿಕಿತ್ಸೆಯಿಂದ ಗುಣವಾಗುವ ಕಾಯಿಲೆ. ಧನಾತ್ಮಕ ಚಿಂತನೆ, ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ಕಾರ್ಯಕ್ರಮ ನಗರದಲ್ಲಿ ಆಯೋಜಿಸಲಾಗಿತ್ತು ಎಂದು ಅವರು ಹೇಳಿದರು.

ಇತ್ತೀಚಿನ ಸಂಶೋಧನೆಗಳ ಪ್ರಕಾರ 10 ಕ್ಯಾನ್ಸರ್​ ರೋಗಿಗಳಲ್ಲಿ ಆರು ಜನ ಬೀಡಿ, ಸಿಗರೇಟ, ತಂಬಾಕು ಸೇವನೆ ಮಾಡುವವರು ಇರುತ್ತಾರೆ. ಹಾಗಾಗಿ ಇಂತಹ ಚಟಗಳಿಗೆ ಅಂಟಿಕೊಳ್ಳುವುದನ್ನು ಬಿಡಬೇಕು. ರೋಗವನ್ನು ಬೇಗ ಪತ್ತೆ ಮಾಡಿದರೆ ಶ್ರೀ ಗುಣಮುಖರಾಗುತ್ತಾರೆ ಎಂದು ಹೇಳಿದರು. ಸರ್ಜನ್​ ಡಾ. ವಿನಾಯಕ ಚವ್ಹಾಣ, ಪ್ರಶಾಂತ ಕುರುಬೇಟ್​, ರಿಕಿ ಖೋಡೆ ಗೋಷ್ಠಿಯಲ್ಲಿದ್ದರು.