ಹಿರೇಮಠದ ನೂತನ ಪೀಠಾಧಿಕಾರ ಮಹೋತ್ಸವ ಅಂಗವಾಗಿ ಜರುಗಿದ ಧರ್ಮದ ಬುತ್ತಿ ಜಾಥಾದಲ್ಲಿ ಸಾಂಪ್ರದಾಯಕ ಉಡುಗೆ ತೊಟ್ಟು ಬುತ್ತಿ ಬುಟ್ಟಿ ಹೊತ್ತು ಮೆರವಣೆಗೆಯಲ್ಲಿ ಸಾಗುತ್ತಿರುವುದು. 
ಧಾರವಾಡ

MARCH: ಸಾಮರಸ್ಯಕ್ಕೆ ಸಾಕ್ಷಿಯಾದ ಬುತ್ತಿ ಜಾಥಾ

ವಿಜಯವಾಣಿ ಸುದ್ದಿಜಾಲ ನವಲಗುಂದ
ಕುಟುಂಬದ ಜತೆ ಕುಳಿತು ಊಟ ಮಾಡಲು ಪುರಸೋತ್ತಿಲ್ಲದ ಇಂದಿನ ದಿನಗಳಲ್ಲಿ ತಾಲೂಕಿನ ಭಕ್ತ ಸಮೂಹವೆಲ್ಲ ಸೇರಿ ಧರ್ಮದ ಬುತ್ತಿ ಹೆಸರಿನಲ್ಲಿ ಜಾತಿ, ಮತಗಳನ್ನು ಮೀರಿ ಎಲ್ಲರೂ ಒಂದಾಗಿ ಹಿರೇಮಠಕ್ಕೆ ಬುತ್ತಿ ಹೊತ್ತು ತರುವ ಮೂಲಕ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದೀರಿ ಎಂದು ಮಣಕವಾಡ ದೇವಮಂದಿರದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಭಾನುವಾರ ಪಂಚಗ್ರಹ ಹಿರೇಮಠದ ನೂತನ ಪೀಠಾಧಿಕಾರ ಹಾಗೂ ಗುರು ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಧರ್ಮದ ಬುತ್ತಿ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ಹಿರೇಮಠದ ನೂತನ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ತಾಲೂಕಿನ ಸಾವಿರಾರು ಮಹಿಳೆಯರು ರಾತ್ರಿ ಪೂರ್ತಿ ಶೆಂಗಾ ಹೋಳಿಗೆ, ರೊಟ್ಟಿ ಬುತ್ತಿ ಮಾಡಿಕೊಂಡು ಬಿಸಿಲು ಲೆಕ್ಕಿಸದೆ ಬೃಹತ್ ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ ಅಧ್ಯಾತ್ಮ ಚಿಂತನೆಗೆ ಆದ್ಯತೆ ನೀಡಿರುವುದು ನವಲಗುಂದದ ಹೆಮ್ಮೆಯಾಗಿದೆ ಎಂದರು.
ಗವಿಮಠದ ಶ್ರೀ ಬಸವಲಿಂಗಸ್ವಾಮೀಜಿ ಮಾತನಾಡಿ, ಈ ಹಿಂದೆ ನಡೆದ ಎಲ್ಲ ಮಠಗಳ ಪಟ್ಟಾಧಿಕಾರ ಮಹೋತ್ಸವಗಳನ್ನೂ ಮೀರಿಸುವಂತಹ ಧಾರ್ಮಿಕ ಕಾರ್ಯಗಳು ತಾಲೂಕಿನ ಎಲ್ಲ ಭಕ್ತರ ಸಹಕಾರದಿಂದ ಹಿರೇಮಠದಲ್ಲಿ ನಡೆದಿರುವುದು ಸಂತಸದ ಸಂಗತಿ ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಮಾತನಾಡಿ, ಪಟ್ಟಣದಲ್ಲಿ ಹಿಂದೇದು ಕಾಣದಂತಹ ಬೃಹತ್ ಧಾರ್ಮಿಕ ಕಾರ್ಯಕ್ರಮ ಇದಾಗಿದೆ. ಸಾವಿರಾರು ಮಹಿಳೆಯರು ಧರ್ಮದ ಬುತ್ತಿ ಹೊತ್ತು ಶ್ರೀಮಠಕ್ಕೆ ಮೆರವಣೆಗೆ ಮೂಲಕ ಬಂದು ಸಾವಿರಾರು ಭಕ್ತರಿಗೆ ಪ್ರಸಾದ ರೂಪದಲ್ಲಿ ಬುತ್ತಿ ನೀಡಿದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಇದಕ್ಕೂ ಮುನ್ನ ಶ್ರೀ ಶಂಕರ ಕಾಲೇಜು ಮೈದಾನದಲ್ಲಿ ಧರ್ಮದ ಬುತ್ತಿ ಜಾಥಾವನ್ನು ಪಂಚಗ್ರಹ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಣಕವಾಡ ಶ್ರೀ ಗವಿಮಠದ ಬಸವಲಿಂಗ ಸ್ವಾಮೀಜಿ, ನರಗುಂದ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ನಿಯೋಜಿತ ಪೀಠಾಧಿಕಾರಿ ಶ್ರೀ ವೀರಬಸವ ಸ್ವಾಮೀಜಿ, ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಚಾಲನೆ ನೀಡಿದರು.
ಅಣ್ಣಪ್ಪ ಬಾಗಿ, ಪಾಂಡಪ್ಪ ಕೋನರಡ್ಡಿ, ಸಿದ್ದಲಿಂಗಯ್ಯ ಹಿರೇಮಠ, ಶಿವಾಜಿ ಕಲಾಲ, ಯಲ್ಲಪ್ಪ ಭೋವಿ, ಮಹೇಶ ಹಳ್ಳದ, ಬಾಬು ಹಳ್ಳದ, ಅಡಿವೆಪ್ಪ ಶಿರಸಂಗಿ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು. ಹಿರೇಮಠದ ಪೀಠಾಧಿಕಾರ ಮಹೋತ್ಸವ ಅಂಗವಾಗಿ ಭಾನುವಾರ ಜರುಗಿದ ಧರ್ಮದ ಬುತ್ತಿ ಜಾಥಾದಲ್ಲಿ 5 ಸಾವಿರಕ್ಕೂ ಹೆಚ್ಚು ಮಹಿಳೆಯರು, ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಟ್ಟು ಮೆರವಣೆಗೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ ಕಳೆ ತಂದರು.